ಮಂಗಳೂರು: ದೇಶದಲ್ಲಿ ರೈತರ ಸಾಲ ಮನ್ನಾ ಮಾಡಬೇಕೆಂಬ ಬೇಡಿಕೆ ಇತ್ತು. ಆದರೆ ಕೇಂದ್ರ ಸರ್ಕಾರ ಉದ್ದಿಮೆದಾರರಲಕ್ಷಾಂತರ ಕೋಟಿ ರೂ.ಸಾಲವನ್ನು ಅಧಿಕೃತವಾಗಿ ಮನ್ನಾ ಮಾಡಿತು ಮಾಜಿ ಸಚಿವ ರಮಾನಾಥ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಬೆಂದೂರ್ವೆಲ್ನಲ್ಲಿ ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಮೋದಿಯವರು ತಾನು ಚೌಕಿದಾರ್ ಎಂದು ಹೇಳುತ್ತಾರೆ. ಆದರೆ ಅವರು ಅಂಬಾನಿ, ಅದಾನಿಯಂತಹ ದೇಶದ ಬಂಡವಾಳಶಾಹಿಗಳ ಚೌಕಿದಾರ್ ಆಗಿದ್ದಾರೆಯೇ ಹೊರತು, ಬಡವರಿಗೆ ಚೌಕಿದಾರ ಅಲ್ಲ ಎಂದು ಟೀಕಿಸಿದರು.
ರೈತನ ಮನೆ ಕಾಯಲು ಕಾವಲುಗಾರ ಬೇಡ. ಸಾಮಾನ್ಯ ವ್ಯಕ್ತಿಯ ಮನೆ ಕಾಯಲೂ ಕಾವಲುಗಾರ ಬೇಡ. ಬಂಡವಾಳಶಾಹಿಗಳ ಮನೆ ಕಾಯಲು ಮಾತ್ರ ಕಾವಲುಗಾರರು ಬೇಕಾಗಿರುವುದು. ಮಂಗಳೂರಿನಲ್ಲಿ ಕಾವಲುಗಾರ ಇದ್ದರೆ ಬಂಡವಾಳಶಾಹಿಗಳ, ಶ್ರೀಮಂತರ ಮನೆ ಕಾಯಲು ಮಾತ್ರ. ಮೋದಿಯವರು ಬಂಡವಾಳ ಶಾಹಿಗಳ ಕಾವಲುಗಾರ. ಜನಸಾಮಾನ್ಯರ ಕಾವಲುಗಾರ ಅಲ್ಲವೆಂದು ರೈ ಹರಿಹಾಯ್ದರು. ಇನ್ನು ಕರ್ನಾಟಕದಲ್ಲಿ 1.50 ಲಕ್ಷ ರೂ. ಸಾಲ ಮನ್ನಾ ಮಾಡಿದ ಹೆಗ್ಗಳಿಕೆ ಹಿಂದಿನ ಸಿದ್ದರಾಮಯ್ಯ ಸರ್ಕಾರ ಹಾಗೂ ಈಗಿನ ಸಮ್ಮಿಶ್ರ ಸರ್ಕಾರಕ್ಕಿದೆ ಎಂದು ಅವರು ಇದೇ ವೇಳೆ ಹೇಳಿದರು.
ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಮಾತನಾಡಿ, ನಾಳೆ ನಮ್ಮ ದ.ಕ. ಜಿಲ್ಲೆಗೆ ಕರಾಳ ದಿನ. ನಾಳೆ ವಿಜಯ ಬ್ಯಾಂಕ್ ಅಂತ್ಯಗೊಳ್ಳಲಿದೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಅದು ನಾಳೆಯಿಂದ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳ್ಳಲಿದೆ. ಈ ಎಪ್ರಿಲ್ 1ಕ್ಕೆ ವಿಜಯ ಬ್ಯಾಂಕ್ನ ಬೋರ್ಡನ್ನು ಇಳಿಸಲಾಗುತ್ತಿದೆ. ಆದರೆ ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿದ್ದರೆ ಮತ್ತೊಂದು ಎಪ್ರಿಲ್ 1ಕ್ಕೆ ಮತ್ತೆ ವಿಜಯ ಬ್ಯಾಂಕ್ನ ಬೋರ್ಡನ್ನು ಏರಿಸುವಂತಹ ಕೆಲಸನ್ನು ಮಾಡುತ್ತೇನೆಂದು ಭರವಸೆ ನೀಡಿದರು.
ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲು ಅವರು ಜಿಲ್ಲೆಯ ಯುವಕರನ್ನು ಬಳಸಿಕೊಂಡು ಅಧಿಕಾರ ಸ್ವೀಕರಿದ್ದಾರೆ. ಆದರೆ ಯುವಕರಿಗೆ ಉದ್ಯೋಗ ಕೊಡುವ ಬದಲು, ಅವರನ್ನು ಬಳಸಿಕೊಂಡು ಕೋಮುಗಲಭೆ ಸೃಷ್ಟಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಮಿಥುನ್ ರೈ ಆರೋಪಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದ.ಕ. ಜಿಲ್ಲೆಯ ಯುವಕರಿಗೆ ಶೇ.100 ಪ್ರತಿಶತ ಉದ್ಯೋಗ ನೀಡುವ ಪ್ರಮಾಣ ಮಾಡುತ್ತೇನೆ ಎಂದು ಭರವಸೆ ನೀಡಿದರು. ದ.ಕ. ಜಿಲ್ಲೆಯಲ್ಲಿ ಮತದಾನಕ್ಕೆ ಇನ್ನು ಉಳಿದಿರುವುದು ಕೇವಲ 18 ದಿನಗಳು ಮಾತ್ರ. ಈ 18 ದಿನಗಳಲ್ಲಿ ಜಿಲ್ಲೆಯಲ್ಲಿರುವ ಬಿಜೆಪಿಯ ಭದ್ರಕೋಟೆಯನ್ನು ಒಡೆಯುವ ಕೆಲಸ ಆಗಬೇಕಾಗಿದೆ. ಅದಕ್ಕೆ ಪಕ್ಷದ ಎಲ್ಲಾ ಕಾರ್ಯಕರ್ತರ ಸಹಕಾರ ಅಗತ್ಯವೆಂದು ಮಿಥುನ್ ರೈ ಹೇಳಿದರು.
ಕಾರ್ಯಕ್ರಮವನ್ನು ಮೂರು ಧರ್ಮಗಳ ಧರ್ಮಗುರುಗಳಾದ ನಗರದ ಬೋಳಾರ, ಹಳೆಕೋಟೆಯ ಶ್ರೀ ಮುಖ್ಯಪ್ರಾಣ ದೇವಾಲಯದ ಅರ್ಚಕ ಗುರುಪ್ರಸಾದ್ ಭಟ್, ರೊಸಾರಿಯೊ ಕೆಥೆಡ್ರಲ್ ನ ಧರ್ಮದರ್ಶಿ ಜೆ.ಬಿ. ಕ್ರಾಸ್ತಾ, ಕಂಕನಾಡಿ ರೆಹ್ಮಾನಿಯಾ ಜುಮ್ಮಾ ಮಸೀದಿಯ ಧರ್ಮಗುರು ಜನಾಬ್ ಅಬ್ದುಲ್ ರೆಹ್ಮಾನ್ ಉದ್ಘಾಟಿಸಿದರು.
ಈ ಸಂದರ್ಭ ದ.ಕ.ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವರಾದ ಜೆ.ಆರ್. ಲೋಬೊ, ಶಕುಂತಲಾ ಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.