ಮಂಗಳೂರು : ಕಾಂಗ್ರೆಸ್ ನಗರದ ವೆನ್ಲಾಕ್ ಆಸ್ಪತ್ರೆಯ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡಿ ಜಿಲ್ಲೆಗೆ ಕೆಟ್ಟ ಹೆಸರು ತರುವುದಲ್ಲದೆ, ಜನರು ವೆನ್ಲಾಕ್‌ಗೆ ಬರಲು ಭಯಪಡುವ ವಾತಾವರಣವನ್ನು ನಿರ್ಮಿಸುತ್ತಿದೆ.
ಆದ್ದರಿಂದ ಆರೋಗ್ಯದ ವಿಚಾರಲ್ಲಿ ಚೆಲ್ಲಾಟವಾಡುವುದನ್ನು ಕಾಂಗ್ರೆಸ್ ನಿಲ್ಲಿಸಲಿ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ವೆನ್ಲಾಕ್ ಆಸ್ಪತ್ರೆಯಲ್ಲಿ ಬಡವರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳಿದ್ದರೂ, ಕಾಂಗ್ರೆಸ್ ಜನರ ದಿಕ್ಕು ತಪ್ಪಿಸಲು ಯತ್ನಿಸುತ್ತಿದೆ.
ಬಡವರು ಸರಕಾರಿ ಆಸ್ಪತ್ರೆಗೆ ಬಾರದ ರೀತಿಯಲ್ಲಿ ಭಯವನ್ನು ಸೃಷ್ಟಿ ಮಾಡುತ್ತಿದ್ದಾರೆ. ಆರೋಗ್ಯ ವಿಷಯದಲ್ಲಿ ಈ ರೀತಿಯ ರಾಜಕಾರಣ ಕಾಂಗ್ರೆಸ್‌ಗೆ ಶೋಭೆಯಲ್ಲ ಎಂದು ಹೇಳಿದರು.
ಕಳೆದ 50 ವರ್ಷಗಳಲ್ಲಿ ಕಾಂಗ್ರೆಸ್‌ನಿಂದ ವೆನ್ಲಾಕ್ ಆಸ್ಪತ್ರೆಗೆ ಹೇಳಿಕೊಳ್ಳುವ ಯಾವ ಕೊಡುಗೆಯೂ ದೊರೆತಿಲ್ಲ. ಆದರೆ, ಬಿಜೆಪಿ ಒಂದೇ ವರ್ಷದಲ್ಲಿ ವೆನ್ಲಾಕ್ ಆಸ್ಪತ್ರೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿದೆ. ಯು.ಟಿ.ಖಾದರ್ ಅವರು ರಾಜ್ಯದ ಆರೋಗ್ಯ ಸಚಿವರಾಗಿದ್ದಾಗಲೂ ವೆನ್ಲಾಕ್‌ಗೆ ಯಾವುದೇ ಲಾಭವಾಗಿಲ್ಲ.
ವೆನ್ಲಾಕ್‌ನಲ್ಲಿ ಈವರೆಗೆ ಕೇವಲ 12 ಇಂಟೆನ್‌ಸಿವ್ ಕೇರ್ ಇತ್ತು. ಆದರೆ, ಕೊರೊನಾ ಜಿಲ್ಲೆಯನ್ನು ಕಾಡಿದ ಬಳಿಕ ಒಂದೇ ವರ್ಷದಲ್ಲಿ ಸಂಸದ ನಳಿನ್ ಕುಮಾರ್ ಮತ್ತು ಬಿಜೆಪಿ ಸರಕಾರದ ಮುತುವರ್ಜಿಯಿಂದಾಗಿ 70 ವೆಂಟಿಲೇಟರ್‌ಗೇರಿಸಲಾಯಿತು. ಅಲ್ಲದೆ 20 ವೆಂಟಿಲೇಟರ್‌ಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗಾಗಿ ಮೀಸಲಿರಿಸಲಾಗಿದೆ.
ಒಟ್ಟು 90 ವೆಂಟಿಲೇಟರ್‌ಗಳು ಬಡವರಿಗೆ ಸುಲಭವಾಗಿ ದೊರೆಯುತ್ತಿವೆ. ವೆನ್ಲಾಕ್‌ನಲ್ಲಿ ಇದ್ದ 6 ಟನ್ ಸಾಮರ್ಥ್ಯದ ಆಕ್ಸಿಜನ್ ಸಿಲಿಂಡರ್ ಈಗ 12 ಟನ್‌ಗೆ ಏರಿಕೆಯಾಗಿದೆ. ಇವೆಲ್ಲವೂ ಬಡವರಿಗಾಗಿ ಮೀಸರಿಸಲಾಗಿದೆ ಎಂದರು.
ಇದನ್ನೂ ಓದಿ: ಬಹರೈನ್ನಿಂದ ರಾಜ್ಯಕ್ಕೆ ಬಂದ ಆಕ್ಸಿಜನ್: ಮಂಗಳೂರಿನ ಇಬ್ಬರು ಶಾಸಕರ ನಡುವೆ ಟ್ವೀಟ್ ವಾರ್
ದೇಶದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸೋಂಕು ಹೆಚ್ಚಿನ ಪ್ರಾಣಹಾನಿ ಮಾಡುವ ಮೊದಲೇ ಮುಂಜಾಗ್ರತಾ ಕ್ರಮವಾಗಿ ಭಾರತ ಸರಕಾರವು ಬಹರೈನ್ ದೇಶಕ್ಕೆ ಆಕ್ಸಿಜನ್ ಕಳುಹಿಸಿಕೊಡುವಂತೆ ಮನವಿ ಸಲ್ಲಿಸಿದೆ. ಒಂದಷ್ಟು ರಾಜತಾಂತ್ರಿಕ ಬದಲಾವಣೆಗಳ ಕಾರಣ ಕೇಂದ್ರ ಸರಕಾರವು ರೆಡ್ ಕ್ರಾಸ್ ಸಂಸ್ಥೆಯ ಮೂಲಕ ಆಕ್ಸಿಜನ್ ಪಡೆಯಲು ನಿರ್ಧರಿಸಿತ್ತು.
ಹಾಗಾಗಿ, ಮುಂಬೈ ಬಂದರಿಗೆ ನೇರವಾಗಿ ಬಹರೈನ್ನಿಂದ ಆಕ್ಸಿಜನ್ ತರುವ ಪ್ರಕ್ರಿಯೆ ನಡೆದಿತ್ತು. ಆದರೆ ಕರ್ನಾಟಕ ಸರಕಾರದ ಬೇಡಿಕೆಯ ಪ್ರಕಾರ ಕೇಂದ್ರ ಸರಕಾರವು ಮುಂಬೈ ಬದಲಿಗೆ ಮಂಗಳೂರು ಬಂದರಿಗೆ ಆಕ್ಸಿಜನ್ ಕಳುಹಿಸಲು ಕೇಳಿಕೊಂಡಿದೆ.
ಮಂಗಳೂರು ನವ ಬಂದರಿಗೆ ಐ.ಎನ್.ಎಸ್ ತಲ್ವಾರ್ ಹಡಗಿನಲ್ಲಿ ಬಂದಿಳಿದ ಆಕ್ಸಿಜನ್ ಕಂಟೈನರ್ಗಳನ್ನು ಕಾನೂನು ಪ್ರಕ್ರಿಯೆಗಳ ಅನ್ವಯ ರೆಡ್ ಕ್ರಾಸ್ ಸಂಸ್ಥೆಗೆ ಹಸ್ತಾಂತರಿಸಿದ ಬಳಿಕ ಐಒಸಿ (ಇಂಡಿಯನ್ ಆಯಿಲ್ ಕಾರ್ಪೊರೇಶನ್) ಮೂಲಕ ರಾಜ್ಯ ಸರಕಾರಕ್ಕೆ ಹಸ್ತಾಂತರಿಸಿ ಅಲ್ಲಿಂದ ವಿವಿಧ ಕಡೆಗಳಿಗೆ ವಿತರಿಸುವ ಕಾರ್ಯ ಆಗಿದೆ. ಇವೆಲ್ಲವೂ ಸರಕಾರಗಳ ನಡುವಿನ ಒಪ್ಪಂದದ ಪ್ರಕಾರ ನಡೆದಿರುವ ಪ್ರಕ್ರಿಯೆಯಾಗಿದೆ ಎಂದರು.
ಆದರೆ, ಸಾರ್ವಜನಿಕವಾಗಿ ಟೀಕೆ ಮಾಡುತ್ತಿರುವ ಕಾಂಗ್ರೆಸ್ ಮುಖಂಡರು ಮೊದಲು ವಿಚಾರವನ್ನು ಅರ್ಥಮಾಡಿಕೊಳ್ಳಬೇಕು. ರೆಡ್ ಕ್ರಾಸ್ ಸಂಸ್ಥೆಯ ಮುಖ್ಯಸ್ಥರಾಗಿ ರಾಷ್ಟ್ರಪತಿಗಳು ಹಾಗೂ ಕೇಂದ್ರ ಆರೋಗ್ಯ ಸಚಿವರ ಪರಿಧಿಯೊಳಗೆ ಬರುತ್ತದೆ. ರಾಜ್ಯಕ್ಕೆ ರಾಜ್ಯಪಾಲರು ಪ್ರಮುಖರಾದರೆ ಜಿಲ್ಲೆಗಳಿಗೆ ಜಿಲ್ಲಾಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳಿಗೂ ಜವಬ್ದಾರಿಯಿರುತ್ತದೆ.
ಹಾಗಿರುವಾಗ ಸರಕಾರ ತರಿಸಿಕೊಂಡ ಆಕ್ಸಿಜನ್ ಕಂಟೈನರ್ ಗಳನ್ನು ಸ್ವಾಗತಿಸಿದರಲ್ಲಿ, ಪ್ರಧಾನಿಯವರನ್ನು ಅಭಿನಂದಿಸುವುದರಲ್ಲಿ ತಪ್ಪೇನಿದೆ. ಪ್ರತಿಯೊಂದರಲ್ಲೂ ರಾಜಕೀಯ ಮಾಡುವ ಕಾಂಗ್ರೆಸಿಗರು ತಮ್ಮ ಬುದ್ಧಿವಂತಿಕೆಯನ್ನು ಒಳ್ಳೆಯ ಕಾರ್ಯಕ್ಕಾಗಿ ವಿನಿಯೋಗಿಸಲಿ ಇಂತಹ ಕಠಿಣ ಪರಿಸ್ಥಿತಿಯಲ್ಲಿ ರಾಜಕೀಯ ಬೀದಿ ನಾಟಕಗಳ ಅಗತ್ಯವಿಲ್ಲ ಎಂದು ಶಾಸಕ ಕಾಮತ್ ಹೇಳಿದರು.
ಈ ಸಂದರ್ಭ ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಬಿಜೆಪಿ ದಕ್ಷಿಣ ಮಂಡಲ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.