ಮಂಗಳೂರು : ಬಿಜೆಪಿ ಸರಕಾರ ದಿಕ್ಕು ತಪ್ಪಿಸಲು ಹಾಗೂ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುತ್ತಿದ್ದಾರೆ ಎಂದು ಶಾಸಕ, ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿಂದು ಮಾತನಾಡಿದ ಅವರು, ಬಡವರಿಗೆ ಎರಡು ವರ್ಷಗಳಲ್ಲಿ ರೇಷನ್ ಕಾರ್ಡ್ ಕೊಡಲಿಲ್ಲ, ನಿವೇಶನ, ಸ್ಕಾಲರ್ ಶಿಪ್ ದೊರಕಿಲ್ಲ, ಸಿಎಂ ತಮ್ಮ ಮೇಲೆ ಹಸ್ತಕ್ಷೇಪದ ಬಗ್ಗೆ ಮಂತ್ರಿಗಳಿಂದ ರಾಜ್ಯಪಾಲರಿಗೆ ಪತ್ರ, ದೇಶದ ಆರ್ಥಿಕ ಪರಿಸ್ಥಿತಿ ತಲ್ಲಣಗೊಂಡಿದೆ. ಈ ಎಲ್ಲಾ ವಿಚಾರಗಳನ್ನು ಮುಚ್ಚಿಡುವ ಮೂಲಕ ಜನರನ್ನು ದಿಕ್ಕು ತಪ್ಪಿಸಲು ಬಿಜೆಪಿ ಸರಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುತ್ತಿದೆ ಎಂದರು.
ಬಲವಂತದ ಮತಾಂತರವನ್ನು ಯಾವ ಧರ್ಮವೂ ಒಪ್ಪುವುದಿಲ್ಲ. ಆದರೆ, ಬಿಜೆಪಿಗರಲ್ಲಿ ಇರೋದು ನೈಜ ಕಾಳಜಿಯಲ್ಲ. ಬಲವಂತದ ಮತಾಂತರದ ವಿರುದ್ಧ ಕಾನೂನು ಕಾಯ್ದೆಗಳಿವೆ. ಕ್ರಿಸ್ಮಸ್ ಹಬ್ಬದ ಬರುವ ಈ ಸಮಯದಲ್ಲೇ ಜನರಲ್ಲಿ ಗೊಂದಲ ಸೃಷ್ಟಿ ಮಾಡುತ್ತಿರೋದು ಸರಿಯಲ್ಲ.
ಮೊಘಲರು, ಬ್ರಿಟಿಷರು ಈ ದೇಶವನ್ನು ನೂರಾರು ವರ್ಷಗಳ ಕಾಲ ಆಳ್ವಿಕೆ ಮಾಡಿದರೂ, ಈ ದೇಶದಲ್ಲಿ ಶೇ 80ರಷ್ಟು ಹಿಂದೂಗಳಿದ್ದಾರೆ. ಇದು ಯಾವುದೇ ಸರಕಾರ ಉಳಿಸಿಕೊಂಡು ಬಂದಿರೋದು ಅಲ್ಲ. ಜನಸಾಮಾನ್ಯರು ಉಳಿಸಿಕೊಂಡು ಬಂದಿರೋದು ಎಂದು ಹೇಳಿದರು.
ದ.ಕ.ಜಿಲ್ಲೆ ಶಿಕ್ಷಣ ಹಾಗೂ ವೈದ್ಯಕೀಯ ಸೇವೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮುಂದುವರಿಯಲು ಕ್ರಿಶ್ಚಿಯನ್ ಸಂಸ್ಥೆಗಳೇ ಕಾರಣ. ಹಿಂದೆ ಕುಷ್ಠರೋಗಿಗಳಿಗೆ ಏಕೈಕ ಆಸ್ಪತ್ರೆ ಫಾದರ್ ಮುಲ್ಲರ್ ಆಸ್ಪತ್ರೆಯಾಗಿತ್ತು. ಅವರೇನು ಮತಾಂತರ ಮಾಡಿದರೇ ಎಂದು ಪ್ರಶ್ನಿಸಿದ ಖಾದರ್, ಬಲವಂತದ ಮತಾಂತರವಾದಲ್ಲಿ ಅದರ ಬಗ್ಗೆ ತನಿಖೆಯಾಗಲಿ. ತಪ್ಪಿದ್ದಲ್ಲಿ ಯಾರೂ ಮಾತನಾಡೋದಿಲ್ಲ. ದೇಶದಲ್ಲಿ ಮತಾಂತರ ನಿಷೇಧ ಕಾಯ್ದೆಯ ಬಗ್ಗೆ ಸೂಕ್ಷ್ಮವಾಗಿ ಚರ್ಚೆ ನಡೆಸಿ ಆ ಬಳಿಕ ಕಾನೂನು ಜಾರಿಯಾಗಲಿ ಎಂದು ಹೇಳಿದರು.
ಇದನ್ನೂ ಓದಿ : ಬೇಲಿ ಹಾರಿಯಾದರೂ ಸುವರ್ಣ ಸೌಧಕ್ಕೆ ಮುತ್ತಿಗೆ: ಸರ್ಕಾರಕ್ಕೆ ಗಡುವು ಕೊಟ್ಟ ಕೋಡಿಹಳ್ಳಿ ಚಂದ್ರಶೇಖರ್