ಪುತ್ತೂರು : ಲಾಕ್ಡೌನ್ ಸಡಿಲಗೊಳಿಸಲಾಗಿದೆ. ಆದರೆ ಕೊರೊನಾದಿಂದ ಜೀವ ಉಳಿಸುವ ಕಾಯಕದಲ್ಲಿ ಲಕ್ಷಾಂತರ ಮಂದಿ ಶ್ರಮ ಪಡುತ್ತಿದ್ದಾರೆ. ಅವರ ಶ್ರಮವನ್ನು ವ್ಯರ್ಥಗೊಳಿಸುವ ಪ್ರಯತ್ನ ಯಾರೂ ಮಾಡಬಾರದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಪುತ್ತೂರು ಮಹಾಲಿಂಗೇಶ್ವರ ದೇವಳದ ಸಭಾಭವನದಲ್ಲಿ ತಾ.ಪಂ ವತಿಯಿಂದ ನೀಡಲಾದ ದಿನಸಿ ಕಿಟ್ ವಿತರಣೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಶಕ್ತರಿಂದ ಅಶಕ್ತರಿಗೆ ದಾನ ನೀಡುವ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ಸಂಕಷ್ಟದಲ್ಲಿರುವ ಜನತೆಯ ಬದುಕಿಗೆ ಜೀವ ತುಂಬುವ ಪೂರಕ ಕಾರ್ಯಕ್ರಮ ಇದಾಗಿದೆ. ಆದಷ್ಟು ಬೇಗ ಜಿಲ್ಲೆ ಕೊರೊನಾ ಮುಕ್ತವಾಗಲು ಜನತೆಯ ಸಹಕಾರ ಅಗತ್ಯ ಎಂದರು.
ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ, ಪುತ್ತೂರು ತಾ.ಪಂ ವತಿಯಿಂದ ಎಂಆರ್‌ಪಿಎಲ್ ಕೊಡುಗೆ ಮೂಲಕ ರೂ.5 ಲಕ್ಷ ವೆಚ್ಚದಲ್ಲಿ 1000 ಕಿಟ್ ವಿತರಣೆ ಮಾಡಲಾಗುವುದು. ತಾ.ಪಂ ಪ್ರತಿ ಸದಸ್ಯರಿಗೆ 45 ಕಿಟ್ ನೀಡಲಾಗುವುದು. ಈ ಕಿಟ್ ಗಳನ್ನು ಯಾವುದೇ ಜಾತಿ, ರಾಜಕೀಯ ಭೇದವಿಲ್ಲದೆ ಸಂಕಷ್ಟದಲ್ಲಿರುವ ಜನತೆಗೆ ವಿತರಣೆ ಮಾಡಬೇಕು ಎಂದು ಸೂಚಿಸಿದರು.