ಮಂಗಳೂರು: ಮಿಸ್ ಯುನಿವರ್ಸ್ ಸ್ಪರ್ಧೆಗೆ ಭಾರತ ಪ್ರತಿನಿಧಿಸಲು ಆಯ್ಕೆಯಾದ ದಿವಿತಾ ರೈ ಅವರಿಗೆ ಮಂಗಳೂರಿನಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ ಮೂಲದ ದಿವಿತಾ ರೈ (23) ಅವರ ತಂದೆ ದಿಲಿಪ್ ರೈ ಮತ್ತು ತಾಯಿ ಪ್ರವೀತ ರೈ ಜೊತೆಗೆ ಮುಂಬೈನಲ್ಲಿ ವಾಸವಾಗಿದ್ದಾರೆ. ಅಲ್ಲಿಯೇ ಶಿಕ್ಷಣ ಪಡೆದುಕೊಂಡ ಇವರು ಮುಂಬೈನ ಸರ್ ಜೆಜೆ ಕಾಲೇಜ್ ಆಫ್ ಆರ್ಕಿಟೆಕ್ಚರ್ನಲ್ಲಿ ಪದವಿ ಪಡೆದಿದ್ದಾರೆ.
ಆ.28 ರಂದು ನಡೆದ ಕಾರ್ಯಕ್ರಮದಲ್ಲಿ ಮಿಸ್ ದಿವಾ ಯೂನಿವರ್ಸ್ ಕಿರೀಟ ಮುಡಿಗೇರಿಸಿಕೊಂಡಿರುವ ದಿವಿತಾ ರೈ ಮುಂಬರುವ ಮಿಸ್ ಯುನಿವರ್ಸ್ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಹೀಗಾಗಿ ಅವರಿಗೆ ಬಂಟ ಸಮುದಾಯದಿಂದ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ರಾಮಕೃಷ್ಣ ವಿದ್ಯಾರ್ಥಿ ಭವನ ಅಮೃತೋತ್ಸವ ಸಮಿತಿಯಿಂದ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿಯ ಶ್ರೀಮತಿ ಗೀತಾ ಎಸ್ ಎಂ ಶೆಟ್ಟಿ ಸಭಾಂಗಣದಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ದಿವಿತಾ ರೈ, "ಆತ್ಮೀಯವಾಗಿ ಅಭಿನಂದಿಸಿದ ಹುಟ್ಟೂರಿನ ಜನತೆಗೆ ಋಣಿಯಾಗಿದ್ದೇನೆ. ನಿಮ್ಮೆಲ್ಲರ ನಿರೀಕ್ಷೆ ಈಡೇರಿಸುವ ಆತ್ಮವಿಶ್ವಾಸ ಹೊಂದಿದ್ದೇನೆ" ಎಂದರು.
ಇದಕ್ಕೂ ಮುನ್ನ ದಿವಿತಾ ರೈ ಅವರನ್ನು ಭವ್ಯ ಮೆರವಣಿಗೆಯಲ್ಲಿ, ಚಂಡೆ, ಹುಲಿವೇಷಗಳ ನರ್ತನಗಳೊಂದಿಗೆ ಸ್ವಾಗತಿಸಲಾಯಿತು. ಮುತ್ತೈದೆಯರಿಂದ ಆರತಿ ಬೆಳಗಿ ಸ್ವಾಗತಿಸಿದ ಬಳಿಕ ಸಭಾಂಗಣದಲ್ಲಿ ಯಕ್ಷಗಾನ ನೃತ್ಯ ಮತ್ತು ಸೋಣ (ಕರಾವಳಿಯ ಶ್ರಾವಣ) ದ ಮಹತ್ವ ಹೇಳುತ್ತಾ ಬರ ಮಾಡಿಕೊಳ್ಳಲಾಯಿತು.
ಇದನ್ನೂ ಓದಿ: ಮಿಸ್ ದಿವಾ ಯೂನಿವರ್ಸ್ ಕಿರೀಟ ಮುಡಿಗೇರಿಸಿಕೊಂಡ ಕರ್ನಾಟಕದ ಬ್ಯೂಟಿ ದಿವಿತಾ ರೈ