ಮಂಗಳೂರು: ನಗರದ ಮುಲ್ಕಿಯ ಕಾರ್ನಾಡುವಿನ ಮೈಮುನಾ ಫೌಂಡೇಶನ್ ಆಪದ್ಬಾಂಧವ ಆಸೀಫ್ ಅವರ ಮಾನವೀಯ ಕಾರ್ಯದಿಂದ ಮಾನಸಿಕ ಅಸ್ವಸ್ಥನೋರ್ವನು ಗುಣಮುಖನಾಗಿ ಮರಳಿ ತನ್ನ ಕುಟುಂಬವನ್ನು ಸೇರಿದ ಘಟನೆ ಇಂದು ಮಂಗಳೂರು ಉತ್ತರ ಪೊಲೀಸ್(ಬಂದರು) ಠಾಣೆಯಲ್ಲಿ ನಡೆದಿದೆ. ಉತ್ತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಗೋವಿಂದ ರಾಜು ಬಿ. ಅವರು ಆತನನ್ನು ಕುಟುಂಬಸ್ಥರ ಸುಪರ್ದಿಗೆ ನೀಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ನಗರದ ರಥಬೀದಿ ಪರಿಸರದಲ್ಲಿ ಸುತ್ತಮುತ್ತಲೂ ಅಲೆದಾಡುತ್ತಾ, ಕೆಲವೊಂದು ಬಾರಿ ಜನರಿಗೆ, ಅಂಗಡಿಗಳಿಗೆ ಕಲ್ಲುಗಳನ್ನು ಎಸೆದು ಭೀತಿ ಸೃಷ್ಟಿಸುತ್ತಿದ್ದ ರಾಜು ಅಲಿಯಾಸ್ ಮಹೇಶ್ ನನ್ನು ಕರೆದೊಯ್ಯಲು ದೂರದ ರಾಜಸ್ತಾನದಿಂದ ತಂದೆ ಹಾಗೂ ಸಹೋದರ ರೈಲಿನ ಮೂಲಕ ಬಂದಿದ್ದಾರೆ. ಇನ್ನೂ ಮಹೇಶ್ ನಾಳೆ ಬೆಳಗ್ಗೆ ರೈಲಿನ ಮೂಲಕ ರಾಜಸ್ತಾನಕ್ಕೆ ಪ್ರಯಾಣ ಬೆಳೆಸಿ ಮೂರು ದಿನಗಳೊಳಗೆ ಆತ ತನ್ನ ಕುಟುಂಬವನ್ನು ಸೇರಲಿದ್ದಾನೆ.
ರೈಲ್ವೆಯಲ್ಲಿ ನೌಕರಿಯಲ್ಲಿದ್ದ ಮಹೇಶ್ ಯಾವುದೋ ಕಾರಣದಿಂದ ಮಾನಸಿಕ ಖಿನ್ನತೆಗೊಳಗಾಗಿ ಮುಂಬೈನಿಂದ ನಾಪತ್ತೆಯಾಗಿದ್ದ. ಆತನಿಗಾಗಿ ಮನೆಯವರು ಸಾಕಷ್ಟು ಹುಡುಕಾಟ ನಡೆಸಿದ್ದರೂ, ಪ್ರಯತ್ನ ಫಲಗೊಡಿರಲಿಲ್ಲ. ಆದರೆ, ಈತ ಹೇಗೋ ಮಂಗಳೂರು ನಗರವನ್ನು ಸೇರಿದ್ದು, ಇಲ್ಲಿನ ರಥಬೀದಿ ಹಾಗೂ ಹತ್ತಿರದ ಪರಿಸರದ ಜನರು ಈತನ ಉಪಟಳಕ್ಕೆ ಒಳಗಾಗಿದ್ದರು. ಇದರಿಂದ ಬೇಸತ್ತ ಪರಿಸರದ ಕಾಳಿಕಾಂಬ ಕೋಲ್ಡ್ ಹೌಸ್ ನ ನಾರಾಯಣ ಎಂಬವರು ಮೈಮುನಾ ಫೌಂಡೇಷನ್ ನ 'ಆಪದ್ಬಾಂಧವ ಸೈಕೋ ರಿಹೆಬಿಲಿಟೇಶನ್ ಸೆಂಟರ್ ನ ಆಸೀಫ್ ಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಆಸೀಫ್ ಅವರು ಆಗಸ್ಟ್ 8 ರಂದು ಮಂಗಳೂರಿಗೆ ಆಗಮಿಸಿ ಅಲ್ತಾಬ್ ಹಾಗೂ ಸ್ಥಳೀಯರ ನೆರವಿನೊಂದಿಗೆ ಮಾನಸಿಕ ಅಸ್ವಸ್ಥನಾಗಿದ್ದ ಮಹೇಶ್ ಪಟೇಲ್ ನ ಕೂದಲು ಬೋಳಿಸಿ, ಸ್ನಾನ ಮಾಡಿಸಿ ಹೊಸ ಬಟ್ಟೆಯನ್ನು ಧರಿಸಲು ನೀಡಿ ತಮ್ಮ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆತನ ಹೆಸರು, ಊರು ಯಾವುದೇ ಮಾಹಿತಿ ಇಲ್ಲದ ಕಾರಣ 'ರಾಜು' ಎಂದು ನಾಮಕರಣ ಮಾಡಿದ್ದಾರೆ. ಪುನರ್ವಸತಿ ಕೇಂದ್ರಲ್ಲಿ ಆತನನ್ನು ಎರಡು ದಿನಗಳ ಕಾಲ ಇರಿಸಿ ಬಳಿಕ ಯನೆಪೊಯ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಆರಂಭವಾದ ಬಳಿಕ ಒಂದು ತಿಂಗಳಲ್ಲಿ ಚೇತರಿಸಿಕೊಂಡ 'ರಾಜು' ತನ್ನ ನಿಜವಾದ ಹೆಸರು ಮಹೇಶ್ ಪಟೇಲ್ ಎಂದಿದ್ದಾನೆ. ಅಲ್ಲದೆ ತಾನು ರಾಜಸ್ತಾನ ಮೂಲದವನು ಎಂದು ಹೇಳಿ ತನ್ನ ಮನೆಯವರ ಬಗ್ಗೆಯೂ ತಿಳಿಸಿದ್ದಾನೆ. ಅಲ್ಲದೆ ಪುನರ್ವಸತಿ ಕೇಂದ್ರದ ವಾರ್ಡನ್ ಅವರ ಮೊಬೈಲ್ ಪಡೆದು ಮನೆಗೆ ಫೋನ್ ಕೂಡಾ ಮಾಡಿದ್ದಾನೆ. ಇದೀಗ ಚೇತರಿಸಿಕೊಂಡಿರುವ ಮಹೇಶ್ ಪಟೇಲ್ ತನ್ನ ಮನೆಗೆ ತೆರಳಲು ತಯಾರಾಗಿದ್ದಾನೆ.
ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಗೋವಿಂದ ರಾಜು ಬಿ. ಮಾತನಾಡಿ, ನಗರದ ರಥಬೀದಿ, ಅಳಕೆ, ನ್ಯೂಚಿತ್ರಾ ಟಾಕೀಸ್ ಬಳಿ ಮಾನಸಿಕ ಅಸ್ವಸ್ಥ ತಿರುಗಾಡುತ್ತಿದ್ದ ಬಗ್ಗೆ ನಾಗರಿಕರು ಫೋಟೋ, ವೀಡಿಯೋ ತೆಗೆದುಕೊಂಡು ಕಳುಹಿಸಿಕೊಟ್ಟು, ಕ್ರಮ ಕೈಗೊಳ್ಳಲು ಹೇಳುತ್ತಿದ್ದರು. ನಾವು ಆತನನ್ನು ತಹಬದಿಗೆ ತರಲು ಪ್ರಯತ್ನ ಪಟ್ಟರೂ ಆತ ನಿಯಂತ್ರಣಕ್ಕೆ ಸಿಗುತ್ತಿರಲಿಲ್ಲ. ಈ ನಡುವೆ ನಾವು ಆಪದ್ಬಾಂಧವ ಸಂಸ್ಥೆಯ ಆಸೀಫ್ ಅವರಿಗೆ ಮಾಹಿತಿ ನೀಡಿದ್ದು, ಅವರು ಯನೆಪೊಯ ಆಸ್ಪತ್ರೆಗೆ ದಾಖಲಿಸಲಿಸಿದ್ದರು. ಅಲ್ಲಿ ಒಂದು ತಿಂಗಳ ಚಿಕಿತ್ಸೆಯಲ್ಲಿ ಗುಣಮುಖನಾಗಿ ನಾಳೆ ಆತ ಮನೆಗೆ ತೆರಳಲಿದ್ದಾನೆ. ಆಪದ್ಬಾಂಧವ ಸಂಸ್ಥೆಯ ಆಸೀಫ್ ಅವರ ಮಾನವೀಯ ಕಾರ್ಯ ನಿಜವಾಗಿಯೂ ಮೆಚ್ಚುವಂತದ್ದು, ಅವರ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಆಪದ್ಬಾಂಧವ ಆಸೀಫ್ ಮಾತನಾಡಿ, ಇಂದು ನನಗೆ ತುಂಬಾ ಸಂತೋಷವಾಗುತ್ತಿದ್ದು, ನಾನು ಮಾಡಿದ ಕೆಲಸ ಇಂದಿಗೆ ಸಾರ್ಥಕವೆನಿಸಿದೆ. ಮಾನಸಿಕ ಅಸ್ವಸ್ಥರ ಬಗ್ಗೆ ಗೇಲಿ ಮಾಡುವುದು ಸಲ್ಲದು. ಆಗ ಅವರು ಮಾನಸಿಕ ಅಸ್ವಸ್ಥರಲ್ಲ ನಾವು ಮಾನಸಿಕ ಅಸ್ವಸ್ಥರಾಗುತ್ತೇವೆ. ಯಾವುದೋ ಸಣ್ಣ ಸಮಸ್ಯೆಗಳಿಂದ ಅವರು ಈ ರೀತಿ ಆಗುತ್ತಾರೆ ಎಂದು ಹೇಳಿದರು.