ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಕ್ಕಿಜ್ವರದ ಭೀತಿ ಸೃಷ್ಟಿಸಿದ್ದ ಸತ್ತ ಕಾಗೆಗಳ ಶವದ ವೈದ್ಯಕೀಯ ವರದಿ ಇಂದು ಜಿಲ್ಲಾಡಳಿತದ ಕೈ ಸೇರಿದೆ.
ಸಾವನ್ನಪ್ಪಿದ ಕಾಗೆಗಳಿಗೆ ಹಕ್ಕಿಜ್ವರ ಇಲ್ಲ ಎಂಬುದು ವೈದ್ಯಕೀಯ ವರದಿಯಿಂದ ಖಾತ್ರಿಯಾಗಿದೆ. ಜನವರಿ 5 ರಂದು ಮಂಗಳೂರು ತಾಲೂಕಿನ ಮಂಜನಾಡಿ ಗ್ರಾಮದಲ್ಲಿ ಸತ್ತ ಕಾಗೆಗಳ ಕಳೆಬರ ಪತ್ತೆಯಾಗಿತ್ತು.
ಇದನ್ನೂ ಓದಿ: 5 ಕಾಗೆಗಳು ಸಾವು : ಮಂಜನಾಡಿ ಅರಂಗಡಿ ಗ್ರಾಮದಲ್ಲಿ ಹಕ್ಕಿ ಜ್ವರದ ಆತಂಕ
ದೇಶದ ವಿವಿಧೆಡೆ ಹಕ್ಕಿಜ್ವರದ ಆತಂಕ ಇರುವುದರಿಂದ ಒಂದೇ ಕಡೆ ಕಾಗೆಗಳು ಸಾವನ್ನಪ್ಪಿರುವ ಘಟನೆ ಆತಂಕ ಸೃಷ್ಟಿಸಿತ್ತು. ಇದರಲ್ಲಿ ಐದು ಕಾಗೆಗಳ ಶವವನ್ನು ಗುಂಡಿಯಲ್ಲಿ ಮುಚ್ಚಿ ಒಂದು ಕಾಗೆಯ ಶವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು.
ಬೆಂಗಳೂರಿನ ಹೆಬ್ಬಾಳದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಸತ್ತ ಕಾಗೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಅವರು ನೀಡಿದ ವರದಿಯ ಪ್ರಕಾರ ಹಕ್ಕಿಜ್ವರವಿಲ್ಲ ಅನ್ನೋದು ಖಚಿತವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ತಿಳಿಸಿದರು.