ಪುತ್ತೂರು: ಎಪಿಎಂಸಿ ಪ್ರಾಂಗಣ ಮತ್ತು ಉಪ ಮಾರುಕಟ್ಟೆ ಪ್ರಾಂಗಣಗಳಾದ ಕಡಬ, ನೆಲ್ಯಾಡಿ, ಕಾಣಿಯೂರು ಸಹಿತ 5 ಮಾರುಕಟ್ಟೆಗಳ ಒಟ್ಟು 150 ವರ್ತಕರು ಸ್ವಯಂಪ್ರೇರಿತ ಲಾಕ್ಡೌನ್ನಲ್ಲಿ ಭಾಗಿಯಾಗಲಿದ್ದಾರೆ.
ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆ ತನಕ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಲಿದೆ. ಮಧ್ಯಾಹ್ನದ ನಂತರ ಯಾವುದೇ ವಹಿವಾಟು ನಡೆಸದಿರಲು ಎಪಿಎಂಸಿ ವರ್ತಕರ ಸಂಘ ತೀರ್ಮಾನಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ರಾಜ್ಯದ ವಿವಿಧ ಭಾಗದಲ್ಲಿ ಕೊರೊನಾ ಹೆಮ್ಮಾರಿ ಅಬ್ಬರ ಹೆಚ್ಚಾಗುತ್ತಿರುವ ಕಾರಣ ಮೇ 30ರ ತನಕ ಎಪಿಎಂಸಿ ಪ್ರಾಂಗಣ ಮತ್ತು 5 ಉಪ ಪ್ರಾಂಗಣಗಳಲ್ಲಿ ಈ ಸ್ವಯಂಪ್ರೇರಿತ ಲಾಕ್‌ಡೌನ್ ಮಾಡಲು ನಿರ್ಧಾರ ಮಾಡಲಾಗಿದೆ ಎಂದರು.
ಅಡಕೆ ಧಾರಣೆ ಕುಸಿತ ತಾತ್ಕಾಲಿಕ:
ಪ್ರಸ್ತುತ ಅಡಕೆ ಧಾರಣೆಯಲ್ಲಿ ಕುಸಿತ ಕಂಡು ಬಂದಿದೆ. ಆದರೆ ಇದು ತಾತ್ಕಾಲಿಕ. ಅಡಕೆ ಧಾರಣೆ ಮತ್ತೆ ಏರಿಕೆ ಕಾಣಲಿದೆ. ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಗೆ ಹೋಗುವ ಅಡಕೆಯನ್ನು ಅಲ್ಲಿನ ರಾಜ್ಯಾಡಳಿತ ಸ್ಥಗಿತಗೊಳಿಸಿದೆ. ಇಲ್ಲಿಂದ ಲಾರಿಗಳಲ್ಲಿ ಒಯ್ಯಲಾದ ಅಡಕೆಯನ್ನು ಕೆಳಗಿಳಿಸಲು ಅನುಮತಿ ದೊರಕದ ಕಾರಣ ಧಾರಣೆಯಲ್ಲಿ ಕುಸಿತ ಉಂಟಾಗಿದೆ. ಆದರೆ ಅಡಕೆಗೆ ಗುಜರಾತ್ ಮತ್ತು ಮಹಾರಾಷ್ಟ್ರದಿಂದ ಹೆಚ್ಚಿನ ಬೇಡಿಕೆ ಇದೆ. ರೈತರು ಈ ಬಗ್ಗೆ ಯಾವುದೇ ರೀತಿಯಲ್ಲಿ ಭಯ ಪಡುವುದು ಬೇಡ ಎಂದು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ತಿಳಿಸಿದರು.