ಬಂಟ್ವಾಳ (ದಕ್ಷಿಣಕನ್ನಡ): ಕರಾವಳಿ ಭಾಗದ ರೈತರ ಕೃಷಿ ಭೂಮಿಯನ್ನು ವಿವಿಧ ಯೋಜನೆಗಳ ಹೆಸರಿನಲ್ಲಿ ನಾಶ ಮಾಡುವ ಕಾರ್ಯ ಮಾಡಲಾಗುತ್ತಿದೆ. ಕೃಷಿ ಭೂಮಿಯನ್ನು ಹಾಳು ಮಾಡಿ ರೈತರನ್ನು ಒಕ್ಕಲೆಬ್ಬಿಸಿ, ಕೈಗಾರಿಕಾ ಪ್ರದೇಶ ಮಾಡುವ ಹುನ್ನಾರವಿದ್ದರೆ ತಕ್ಷಣ ಕೈಬಿಡಬೇಕು. ಯೋಜನೆಯ ಸಮಗ್ರ ಮಾಹಿತಿಯನ್ನು ಬಹಿರಂಗಪಡಿಸಿ, ರೈತಾಪಿ ವರ್ಗಕ್ಕೆ ನ್ಯಾಯ ಒದಗಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಆಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾವುದೇ ಯೋಜನೆ ಜಾರಿ ಮಾಡುವ ಮೊದಲು ರೈತರನ್ನು ಕರೆದು ಸ್ಥಳೀಯ ಮಟ್ಟದಲ್ಲಿ ಮಾತುಕತೆ ಮಾಡದೇ ಹೋದಲ್ಲಿ ರಾಜ್ಯಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಿರಂತರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ರವಾನಿಸಿದರು.
ಕೃಷಿಭೂಮಿ ಹಾಗೂ ಖಾಸಗಿ ಭೂಮಿಯಲ್ಲಿ ಬೃಹತ್ ವಿದ್ಯುತ್ ಮಾರ್ಗ ರಚನೆಯ ಕಾರ್ಯವನ್ನು ಕೈಬಿಟ್ಟು, ಚತುಷ್ಪಥ ಹೆದ್ದಾರಿಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ವಿದ್ಯುತ್ ತೆಗೆದುಕೊಂಡು ಹೋಗುವ ಕಾರ್ಯ ಮಾಡಬೇಕು. ಇದಕ್ಕೆ ಸಮಸ್ಯೆಯಾಗುವುದಾದರೆ ಸಮುದ್ರ ಮಾರ್ಗದ ಮೂಲಕ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ನೀರಿನ ಒಳಗೆ ಕೇಬಲ್ ಬಳಸಿಕೊಂಡು ವಿದ್ಯುತ್ ತೆಗೆದುಕೊಂಡು ಹೋಗಬೇಕೆಂದು ಆಗ್ರಹಿಸಿದರು.
ಓದಿ: ಆರೋಗ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸಿ ಲಸಿಕೆ ಹಾಕಿಸಿಕೊಂಡ ಭೂಪ!
ಯಾವುದೇ ಒಂದು ಯೋಜನೆ ಜಾರಿ ಮಾಡುವವಾಗ ಅದರ ಸಾಧಕ-ಬಾಧಕಗಳನ್ನು ಜನರ ಗಮನಕ್ಕೆ ತಂದು, ಅಭಿಪ್ರಾಯಗಳನ್ನು ಸಂಗ್ರಹಿಸಿ, ಪರಿಹಾರಗಳನ್ನು ವಿತರಣೆ ಮಾಡುವುದು ಕ್ರಮವಾಗಿದೆ. 2013ರಲ್ಲಿ ಪ್ರಾರಂಭವಾದ ಪಡುಬಿದರೆ-ಕಾಸರಗೋಡು ಸಂಪರ್ಕ ಕಲ್ಪಿಸುವ 400 ಕೆವಿ ವಿದ್ಯುತ್ ಮಾರ್ಗದ ಎಲ್ಲಾ ಸರ್ವೇ ಕಾರ್ಯವನ್ನು ಮಾಹಿತಿ ನೀಡದೆ ನಡೆಸಲಾಗಿದೆ. ವಿದ್ಯುತ್ ಟವರ್ ನಿರ್ಮಾಣಕ್ಕಾಗಿ ಗುಪ್ತವಾಗಿ ದಾಖಲೆ ಪತ್ರಗಳ ಕಾರ್ಯ ಮಾಡಿರುವುದು ಸರಿಯಲ್ಲ ಎಂದು ಹೇಳಿದರು.
ಜಿಲ್ಲಾಧಿಕಾರಿ ತಕ್ಷಣ ವಿದ್ಯುತ್ ಮಾರ್ಗ ಸಂಚರಿಸುವ ಜಾಗದ ರೈತರ ಸಭೆ ನಡೆಸಬೇಕು. ಒತ್ತಾಯದಿಂದ ರೈತರನ್ನು ಒಕ್ಕಲೆಬ್ಬಿಸುವುದು, ಅರಣ್ಯ ನಾಶ ಮಾಡುವುದು ಪ್ರಜಾತಂತ್ರ ವ್ಯವಸ್ಥೆಗೆ ವಿರೋಧವಾಗಿ ನಡೆಯುವಂತ ಸರ್ವಾಧಿಕಾರಿ ಧೋರಣೆಯಾಗಿದೆ ಎಂದರು.