ಮಂಗಳೂರು: ಔಷಧ ತರಲೆಂದು ಹೋಗಿ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ, ಸುಬ್ರಹ್ಮಣ್ಯ ಪಂಜ ಕುತ್ಕುಂಜ ಗ್ರಾಮದ ಕುದ್ವ ಶೇಷಪ್ಪ ಗೌಡ ಎಂಬುವವರ ಮೃತದೇಹ ಇಂದು ನಾಗತೀರ್ಥ ಹೊಳೆಯಲ್ಲಿ ಪತ್ತೆಯಾಗಿದೆ.
ನಾಲ್ಕು ದಿನಗಳಿಂದ ಎನ್ಡಿಆರ್ಎಫ್ ತಂಡ ಮತ್ತು ಮುಳುಗು ತಜ್ಞರು ನಿರಂತರವಾಗಿ ರಾತ್ರಿ ಹಗಲೆನ್ನದೇ ಹುಡುಕಾಟದಲ್ಲಿ ತೊಡಗಿದ್ದರು. ಇಂದು ಸಂಜೆ ಶೇಷಪ್ಪ ಗೌಡರ ಮೃತದೇಹ ಅವರು ಹೊಳೆಗೆ ಬಿದ್ದಿದ್ದರೆಂದು ಹೇಳಲಾದ ಸ್ಥಳದಿಂದ ಸುಮಾರು ಒಂದೂವರೆ ಕಿಲೋಮೀಟರ್ ಅಂತರದಲ್ಲಿ, ಪಂಜ ಹೊಳೆಯ ಸೇತುವೆಯಿಂದ ಸುಮಾರು ಇನ್ನೂರೈವತ್ತು ಮೀಟರ್ ದೂರದ ನಾಗತೀರ್ಥ ಹೊಳೆಯಲ್ಲಿ ದೊರಕಿದೆ.
ಘಟನೆಯ ವಿವರ...
ಶೇಷಪ್ಪ ಗೌಡ ಸೆ.3ರಂದು ಬೆಳಗ್ಗೆ ತೋಟದಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದು, ಮಧ್ಯಾಹ್ನ ಜ್ವರಕ್ಕೆ ಔಷಧ ತರಲು ಪಂಜಕ್ಕೆ ಹೋಗುತ್ತೇನೆಂದು ಮನೆಯವರಲ್ಲಿ ಹೇಳಿ ಹೋಗಿದ್ದರು. ಆದರೆ ಸಂಜೆಯಾದರೂ ಮನೆಗೆ ಬಾರದಿರುವುದರಿಂದ ಮಗ ಹರೀಶ್ ಪಂಜಕ್ಕೆ ಸಂಪರ್ಕಿಸುವ ಕಾಲು ದಾರಿಯಲ್ಲಿ ಹುಡುಕುತ್ತಾ ಹೋಗಿದ್ದರು. ಈ ಸಂದರ್ಭ ತೋಟದ ಬಳಿಯ ಕಿರು ಸೇತುವೆಗೆ ಅಡ್ಡಲಾಗಿ ಕಟ್ಟಿರುವ ಮರದ ಕೋಲು ತುಂಡಾಗಿದ್ದು ಗೋಚರಿಸಿದೆ. ಇದರಿಂದ ಸಂಶಯಗೊಂಡು ಅಲ್ಲಿನ ನಿವಾಸಿಗಳೊಂದಿಗೆ ಹುಡುಕಾಟ ನಡೆಸಿದಾಗ ಪಕ್ಕದ ತೋಡಿನಲ್ಲಿ ಒಂದು ಚಪ್ಪಲಿ ಪತ್ತೆಯಾಗಿದೆ.
ಮಾಹಿತಿ ತಿಳಿದು ಸುಳ್ಯದ ಕಂದಾಯ ನಿರೀಕ್ಷಕ ಶಂಕರ್ ಎಂ.ಎ. ಹಾಗೂ ಪೊಲೀಸರು, ಗೃಹರಕ್ಷಕ ದಳದವರೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಶೇಷಪ್ಪ ಗೌಡ ನೀರಿಗೆ ಬಿದ್ದಿದ್ದರೆ ಹೊಳೆ ಸೇರುವ ಸಾಧ್ಯತೆ ಇರುವುದರಿಂದ ಪಂಜ, ಕೊಂಬಾರು, ಶಾಂತಿಮುಗೇರು ಭಾಗಗಳಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಜೊತೆಗೆ ಎನ್ ಡಿಆರ್ ಎಫ್ ತಂಡ ಹಾಗೂ ಮುಳುಗು ತಜ್ಞರು ಕಾರ್ಯಾಚರಣೆ ನಡೆಸಿದ್ದರು. ಆದರೆ, ಗುರುವಾರ ಸಂಜೆಯವರೆಗೂ ಶೇಷಪ್ಪ ಗೌಡ ಪತ್ತೆಯಾಗಿರಲಿಲ್ಲ. ಆದರೆ, ಇಂದು ಮತ್ತೆ ಕಾರ್ಯಾಚರಣೆ ನಡೆಸಿದ್ದು, ಸಂಜೆ ಮೃತದೇಹ ಪೂರ್ತಿಯಾಗಿ ಉಬ್ಬಿಕೊಂಡ ಸ್ಥಿತಿಯಲ್ಲಿ ನಾಗತೀರ್ಥ ಹೊಳೆಯಲ್ಲಿ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಸುಳ್ಯ ತಹಸಿಲ್ದಾರ್ ಕುಂಞಿ ಅಹಮ್ಮದ್ ಭೇಟಿ ನೀಡಿದ್ದು, ಸುಬ್ರಹ್ಮಣ್ಯ ಪೊಲೀಸ್ ಸ್ಥಳ ಪರಿಶೀಲನೆ ನಡೆಸಿದ್ದಾರೆ.