ಮಂಗಳೂರು: ಕೊರೊನಾ ಸೋಂಕು ಲಕ್ಷಣವುಳ್ಳ ಜ್ವರ, ಶೀತ, ನೆಗಡಿ ರೋಗಗಳಿಗೆ ಸರ್ಕಾರಿ, ಖಾಸಗಿ ಆಸ್ಪತ್ರೆ, ಕ್ಲಿನಿಕ್ ಹಾಗೂ ಮೆಡಿಕಲ್ಗಳಲ್ಲಿ ಔಷಧಿ ಪಡೆಯುವವರ ಮಾಹಿತಿಯನ್ನು ಕಡ್ಡಾಯವಾಗಿ ಜಿಲ್ಲಾಡಳಿತಕ್ಕೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್-19 ಲಸಿಕೆಯ ಪೂರ್ವ ತಯಾರಿ ಮತ್ತು 2021ರ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ಹಾಗೂ ರೂಪಾಂತರ ಹೊಸ ಕೊರೊನಾ ರೋಗದ ಕುರಿತು ಜಿಲ್ಲಾ ಮಟ್ಟದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದೇಶಗಳಲ್ಲಿ ಕೋವಿಡ್ 2ನೇ ಅಲೆ ಹಾಗೂ ರೂಪಾಂತರ ಸೋಂಕು ಕಂಡು ಬಂದಿದೆ. ನಮ್ಮ ದೇಶಕ್ಕೂ ಹರಡುವ ಸಾಧ್ಯತೆ ಇರುವ ಹಿನ್ನೆಲೆ ಜಿಲ್ಲೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಆಸ್ಪತ್ರೆಗಳಲ್ಲಿ ಹಾಗೂ ಮೆಡಿಕಲ್ಗಳಲ್ಲಿ ಜ್ವರ, ಶೀತ, ನೆಗಡಿ, ಕೆಮ್ಮು ಸಂಬಂಧಿತ ರೋಗಕ್ಕೆ ಔಷಧಿ ಪಡೆಯುವವರ ಸಂಪೂರ್ಣ ಮಾಹಿತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಇವುಗಳನ್ನು ಸಂಬಂಧಿಸಿದ ಸಾಫ್ಟ್ವೇರ್ನಲ್ಲಿ ನಮೂದಿಸಬೇಕು ಎಂದು ಸೂಚನೆ ನೀಡಿದರು.
ಮದುವೆ ಸೇರಿದಂತೆ ಇನ್ನಿತರ ಸಭಾ ಕಾರ್ಯಕ್ರಮಗಳಲ್ಲಿ 200ಕ್ಕಿಂತ ಅಧಿಕ ಹಾಗೂ ಬಯಲು ಪ್ರದೇಶಗಳಲ್ಲಿ ನಡೆಯುವ ಸಮಾರಂಭಗಳಲ್ಲಿ 500 ಕ್ಕಿಂತ ಅಧಿಕ ಜನ ಪಾಲ್ಗೊಳ್ಳಬಾರದು. ಒಂದು ವೇಳೆ ಮಿತಿ ಮೀರಿದ ಜನ ಪಾಲ್ಗೊಂಡಿರುವುದು ಗಮನಕ್ಕೆ ಬಂದರೆ ಸಂಬಂಧಪಟ್ಟ ಅಧಿಕಾರಿಗಳು ಮುಖ್ಯಸ್ಥರಿಗೆ ಹತ್ತು ಸಾವಿರ ದಂಡ ವಿಧಿಸಬೇಕು. ಮೂರನೇ ಬಾರಿಯೂ ಉಲ್ಲಂಘನೆಯಾದರೆ ಪರವಾನಿಗೆಯನ್ನು ರದ್ದುಗೊಳಿಸಬೇಕು.
ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರು ಮತ್ತು 10 ವರ್ಷದೊಳಗಿನ ಮಕ್ಕಳ ಪ್ರವೇಶ ನಿರ್ಬಂಧಿಸಬೇಕು. ಇದಕ್ಕೆ ಸಂಬಂಧಿಸಿದ ಭಿತ್ತಿಪತ್ರಗಳನ್ನು ದೇವಸ್ಥಾನಗಳ ಆವರಣದಲ್ಲಿ ಪ್ರದರ್ಶಿಸಬೇಕು. ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ಕಡ್ಡಾಯವಾಗಿ ಮಾಸ್ಕ್ ಧಾರಣೆ ಮಾಡಬೇಕು. ಅದೇ ರೀತಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸ್ಯಾನಿಟೈಸರ್ ಉಪಯೋಗಿಸಿಕೊಳ್ಳುವಂತೆ ಆಡಳಿತ ಮಂಡಳಿಯು ಕ್ರಮ ವಹಿಸಬೇಕು. ಈ ಕಾನೂನುಗಳನ್ನು ಉಲ್ಲಂಘಿಸಿದರೆ ಸಂಬಂಧಪಟ್ಟ ಆಡಳಿತ ಮಂಡಳಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ಯುಟಿ ಖಾದರ್ ಕಾರು ಬೆಂಬತ್ತಿ ಬಂದ ಬೈಕ್ ಸವಾರ ಪರಾರಿ, ಪೊಲೀಸರಿಂದ ಶೋಧ ಕಾರ್ಯ
ಉದ್ಯೋಗ ನಿಮಿತ್ತ ಕಾಸರಗೋಡು ಸೇರಿದಂತೆ ಇನ್ನಿತರ ಗಡಿಭಾಗದಿಂದ ನಗರಕ್ಕೆ ಆಗಮಿಸುವವರು ಕಡ್ಡಾಯವಾಗಿ 15 ದಿನಕ್ಕೊಮ್ಮೆ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು. ಅವರ ಟೆಸ್ಟ್ ವರದಿಯನ್ನು ಉದ್ಯೋಗ ಸಂಸ್ಥೆ ಪಡೆದು ಜಿಲ್ಲಾ ಆರೋಗ್ಯ ಇಲಾಖೆಗೆ ನೀಡಬೇಕು. ಜೊತೆಗೆ ನಗರದಿಂದ ಕಾಸರಗೋಡಿಗೆ ತೆರಳುವವರು ಕೂಡ ಪರೀಕ್ಷೆಗೆ ಒಳಗಾಗಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗೆ 800 ರೂ. ದರ ನಿಗದಿಪಡಿಸಲಾಗಿದ್ದು, ಹೆಚ್ಚುವರಿ ದರ ಪಡೆದುಕೊಂಡ ಬಗ್ಗೆ ದೂರು ಬಂದರೆ ಅಂತಹ ಆಸ್ಪತ್ರೆಗಳಿಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಅಂಗಡಿ, ಮಾಲ್, ಮಾರುಕಟ್ಟೆಗಳಲ್ಲಿ ಗ್ರಾಹಕರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇದ್ದಲ್ಲಿ ಮಾಲಕನಿಗೆ ದಂಡ ವಿಧಿಸಬೇಕು. ಆಶಾ ಕಾರ್ಯಕರ್ತೆಯರು ವಿದೇಶದಿಂದ ಬಂದವರ ಮಾಹಿತಿ ಪಡೆದು ಆರೋಗ್ಯ ಕೇಂದ್ರಕ್ಕೆ ನೀಡಬೇಕು, ಅವರನ್ನು ಕಡ್ಡಾಯವಾಗಿ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಐಎಎಸ್ ಪ್ರೊಬೇಷನರಿ ಆಫಿಸರ್ ಮೋನಾ ರೋತ್, ಆರ್.ಸಿ.ಹೆಚ್.ಅಧಿಕಾರಿ ಡಾ. ರಾಜೇಶ್, ಮಹಾನಗರ ಪಾಲಿಕೆಯ ವೈದ್ಯಾಧಿಕಾರಿ ಡಾ.ಮಂಜಯ್ಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.