ಮಂಗಳೂರು : ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್ ಅಥ್ಲೆಟಿಕ್ಸ್ನಲ್ಲಿ ಮಂಗಳೂರಿನ ಯುವಕ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಸ್ಪರ್ಧಾಳುಗಳಲ್ಲಿ ಕರ್ನಾಟಕದ ಮೂವರು ಅಥ್ಲೀಟ್ಗಳು ಪದಕ ಪಡೆದಿದ್ದು, ಇದರಲ್ಲಿ ಮಂಗಳೂರಿನ ಮೀಜೋ ಚಾಕೋ ಕುರಿಯನ್ ಕೂಡಾ ಒಬ್ಬರು.
ಏಷ್ಯನ್ ಗೇಮ್ಸ್ ಅಥ್ಲೆಟಿಕ್ಸ್ನ 400×4 ಮೀಟರ್ ರಿಲೇಯಲ್ಲಿ ಮೀಜೋ ಚಾಕೋ ಕುರಿಯನ್ ಚಿನ್ನದ ಪದಕ ಪಡೆದಿದ್ದಾರೆ. ಇವರು 2023ರಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲೇ ಚಿನ್ನದ ಪದಕ ಗೆದ್ದಿದ್ದರು. ಬಳಿಕ ಅಂತಾರಾಷ್ಟ್ರೀಯ ಮಟ್ಟದ ಹಲವು ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದಿದ್ದಾರೆ. ಈ ಬಾರಿಯ ಏಷ್ಯನ್ ಗೇಮ್ಸ್ನಲ್ಲಿ ಮೀಜೋ ಚಾಕೋ ಕುರಿಯನ್ ತಂಡ 3.01 ನಿಮಿಷದಲ್ಲಿ 400×4 ಮೀಟರ್ ಗುರಿ ತಲುಪಿ ಸಾಧನೆ ಮಾಡಿದ್ದಾರೆ. ಇವರ ತಂಡದಲ್ಲಿ ಇಬ್ಬರು ಕೇರಳ, ಒಬ್ಬರು ತಮಿಳುನಾಡು, ಇಬ್ಬರು ಕರ್ನಾಟಕದ ಸ್ಪರ್ಧಾಳುಗಳಿದ್ದರು.
ಮೀಜೋ ಚಾಕೋ ಕುರಿಯನ್ ಮಂಗಳೂರಿನ ಉರ್ವದಲ್ಲಿರುವ ಸಂತ ಅಲೋಶಿಯಸ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದರು. ಬಳಿಕ ನಗರದ ಶಾರದಾ ಪಿಯು ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದರು. 2015ರಲ್ಲಿ ಅಥ್ಲೆಟಿಕ್ಸ್ನ್ನು ಆರಂಭಿಸಿದ ಇವರು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದರು. 2019 ಭಾರತೀಯ ವಾಯುಸೇನೆಗೆ ಬಡ್ತಿ ಪಡೆದು, 2022ರ ನವೆಂಬರ್ನಲ್ಲಿ ನ್ಯಾಷನಲ್ ಕ್ಯಾಂಪ್ ಆಯ್ಕೆಯಾಗಿ ಅಲ್ಲಿ ಜಮೈಕಾದ ತರಬೇತುದಾರರಿಂದ ತರಬೇತಿ ಪಡೆದರು. 2023ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು. ಏಷ್ಯನ್ ಚಾಂಪಿಯನ್ ಶಿಪ್ನಲ್ಲಿ ಬೆಳ್ಳಿ ಪದಕ, ವರ್ಲ್ಡ್ ಚಾಂಪಿಯನ್ ಶಿಪ್ನಲ್ಲಿ ಇವರ ತಂಡ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಇದೀಗ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಪಡೆದು ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ.
ಈ ಕುರಿತು ಮಾತನಾಡಿದ ಮೀಜೋ ಚಾಕೋ ಕುರಿಯನ್, ಏಷ್ಯನ್ ಗೇಮ್ಸ್ ಪದಕ ಗೆದ್ದು ಚೀನಾದಿಂದ ದೆಹಲಿಗೆ ಬಂದ ನಮ್ಮ ತಂಡಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಭಿನಂದಿಸಿದರು. ನಮ್ಮ ತಂಡವನ್ನು ಮೇಜರ್ ಧ್ಯಾನ್ ಚಂದ್ ಹಾಕಿ ಮೈದಾನದಲ್ಲಿ ಪ್ರಧಾನಿ ಭೇಟಿ ಮಾಡಿದರು. ಕೇಂದ್ರ ಸರ್ಕಾರ ನಮಗೆ ಪ್ರೋತ್ಸಾಹ ನೀಡಿ ನಗದು ಬಹುಮಾನ ನೀಡಿದೆ. ಆದರೆ ರಾಜ್ಯ ಸರ್ಕಾರದಿಂದ ಇದುವರೆಗೆ ಯಾವ ಕರೆಯೂ ಬಂದಿಲ್ಲ. ಇದೀಗ ಮುಂದಿನ ಒಲಿಂಪಿಕ್ಸ್ಗೆ ತಯಾರಿ ನಡೆಸಲಿದ್ದೇವೆ. ಮುಂದಿನ ವರ್ಷ ತರಬೇತಿ ಆರಂಭಿಸಲಿದ್ದೇವೆ. ರಾಜ್ಯ ಸರ್ಕಾರದ ಪ್ರೋತ್ಸಾಹಕ್ಕಾಗಿ ಕಾಯುತ್ತಿದ್ದೇವೆ. ನಮಗೆ ಬೆಂಬಲ ನೀಡಿದರೆ ಇನ್ನಷ್ಟು ಉತ್ತಮ ಪ್ರದರ್ಶನವನ್ನು ನೀಡಬಹುದು. ಕರ್ನಾಟಕದ 15 ಮಂದಿ ಸ್ಪರ್ಧಿಗಳಲ್ಲಿ ನಾಲ್ವರಿಗೆ ಪದಕ ಬಂದಿದೆ ಎಂದು ಹೇಳಿದರು.
ಈ ಬಾರಿಯ ಏಷ್ಯನ್ ಗೇಮ್ಸ್ನಲ್ಲಿ ಭಾರತ ಸಾರ್ವಕಾಲಿಕ ಅತ್ಯುತ್ತಮ ಪ್ರದರ್ಶನ ನೀಡಿದೆ. ಒಟ್ಟು 107 ಪದಕಗಳನ್ನು ಪಡೆದಿದ್ದು, 28 ಚಿನ್ನ, 38 ಬೆಳ್ಳಿ, 41 ಕಂಚಿನ ಪದಕ ಪಡೆದಿದೆ.
ಇದನ್ನೂ ಓದಿ : ಏಷ್ಯನ್ ಗೇಮ್ಸ್: ಭಾರತಕ್ಕೆ ಹಿಂದಿರುಗಿದ ಚಿನ್ನದ ಪದಕ ವಿಜೇತೆ ಸ್ಮೃತಿ ಮಂಧಾನಗೆ ಅದ್ಧೂರಿ ಸ್ವಾಗತ