ಮಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ಅಭಿಪ್ರಾಯ ವ್ಯಕ್ತಪಡಿಸುವವರು ಕಾನೂನಿನ ರೀತಿ ನಮಗೆ ಅರ್ಜಿ ಸಲ್ಲಿಸಬೇಕು. ಬಳಿಕ ಅವಕಾಶ ಕಲ್ಪಿಸುತ್ತೇವೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ. ಎಸ್. ಹರ್ಷ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ 6 ಸಂಘಟನೆಗಳಿಗೆ ಪ್ರತಿಭಟನೆಗೆ ಅನುಮತಿ ನೀಡಲಾಗಿದೆ. ಅನುಮತಿ ಪಡೆಯದೇ ರಸ್ತೆತಡೆ ನಡೆಸಲು ಯತ್ನಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆ ನಡೆಸುವ ಬಗ್ಗೆ ಅರ್ಜಿ ಸಲ್ಲಿಸಿದ ಆರು ಸಂಘಟನೆಗಳಿಗೆ ಅವಕಾಶ ನೀಡಲಾಗಿದೆ. ಹೊರ ರಾಜ್ಯದವರಿಗೆ ಪ್ರತಿಭಟನೆಗೆ ಅವಕಾಶ ನಿರಾಕರಿಸಲಾಗಿದೆ ಎಂದರು. ಪ್ರತಿಭಟನೆಯನ್ನು ಹತ್ತಿಕ್ಕಲಾಗುವುದಿಲ್ಲ, ಕಾನೂನು ಪ್ರಕಾರ ಅರ್ಜಿ ನೀಡಿದವರಿಗೆ ಪರಿಶೀಲಿಸಿ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದ್ರು.
ಇನ್ನು, ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಡಿಸೆಂಬರ್ 20 ಮತ್ತು 23 ರಂದು ಬೃಹತ್ ಪ್ರತಿಭಟನೆ ನಡೆಯಲಿದೆ ಎಂಬ ವದಂತಿ ಎದ್ದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಪ್ರಚಾರ ಮಾಡುವವರ ವಿರುದ್ಧ ಹಾಗು ಅಪಪ್ರಚಾರ ಮಾಡುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮಂಗಳೂರು ಜನತೆ ಸುಳ್ಳು ಅಪಪ್ರಚಾರವನ್ನು ನಂಬಬಾರದು ಎಂದು ವಿನಂತಿಸಿದರು.