ಮಂಗಳೂರು: ನಗರದ ಸೆಂಟ್ರಲ್ ಮಾರ್ಕೆಟ್ ಬಳಿ 2016ರಲ್ಲಿ ನಡೆದಿದ್ದ ಜಯಾನಂದ ಅಲಿಯಾಸ್ ಜಯ ಎಂಬುವರ ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ಆರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದೆ.
ಆರೋಪಿಗಳಾದ ರವೀಂದ್ರ ಸಾಲ್ಯಾನ್ ಅಲಿಯಾಸ್ ರವಿ ಮತ್ತು ನವೀನ ಖುಲಾಸೆಗೊಂಡವರು. ಇನ್ನೊಬ್ಬ ಆರೋಪಿ ರಘು ಎಂಬಾತ ತಲೆಮರೆಸಿಕೊಂಡಿದ್ದಾನೆ.
ಪ್ರಕರಣ ವಿವರ: 2016ರ ಫೆಬ್ರವರಿ 28ರಂದು ಆರೋಪಿಗಳು ಜಯಾನಂದ ಅವರನ್ನು ಬಾರ್‌ಗೆ ಕರೆದುಕೊಂಡು ಹೋಗಿ ಮದ್ಯ ಕುಡಿಸಿ, ಬಳಿಕ ಸೆಂಟ್ರಲ್ ಮಾರ್ಕೆಟ್ನ ತರಕಾರಿ ಅಂಗಡಿ ಸಮೀಪ ಗಂಭೀರ ಹಲ್ಲೆ ನಡೆಸಿ ಚಿನ್ನದ ಸರ, ಹಣ ದೋಚಿದ್ದರಂತೆ. ಮರುದಿನ ತರಕಾರಿ ಅಂಗಡಿಯ ಕೆಲಸದಾತ ಬಂದು ಅಂಗಡಿಯ ಬಾಗಿಲು ತೆರೆದಾಗ ಪ್ರಕರಣ ಬಯಲಿಗೆ ಬಂದಿತ್ತು.
ಓದಿ : ಜಮೀನು ತತ್ಕಾಲ್ ಪೋಡಿ ಮಾಡಿಸಲು ಲಂಚ ಸ್ವೀಕಾರ : ಭೂ ಮೋಜಣಿದಾರ ಎಸಿಬಿ ಬಲೆಗೆ
ಪೊಲೀಸರು ಪ್ರಕರಣದ ತನಿಖೆ ನಡೆಸಿ ಸಿಸಿಟಿವಿ ಕ್ಯಾಮರಾ ಪರಿಶೀಲನೆ ನಡೆಸಿ ಕೃತ್ಯದಲ್ಲಿ ಭಾಗವಹಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ನಗರ ಉತ್ತರ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನಾಪತ್ತೆಯಾಗಿರುವ ಆರೋಪಿ ರಘು ಎಂಬಾತನ ಪತ್ನಿಯ ಬಗ್ಗೆ ಜಯಾನಂದ ಕೆಟ್ಟದಾಗಿ ಮಾತನಾಡುತ್ತಿದ್ದ ಎಂಬ ಕಾರಣಕ್ಕೆ ಆರೋಪಿಗಳು ಕೊಲೆ ಮಾಡಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ರಾಧಾಕೃಷ್ಣ, ಸುಮಾರು 21 ಸಾಕ್ಷಿಗಳನ್ನು ವಿಚಾರಣೆ ನಡೆಸಿ ಆರೋಪಿ ಪರ ಮತ್ತು ಪ್ರಾಸಿಕ್ಯೂಷನ್ ಪರ ವಾದ ಆಲಿಸಿದರು. ಇಬ್ಬರು ಆರೋಪಿಗಳ ಮೇಲಿನ ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ತೀರ್ಮಾನಿಸಿ ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು.