ಮಂಗಳೂರು: ಇಂದು ಬೆಳ್ಳಂಬೆಳಗ್ಗೆ ನಗರದ ನಾಲ್ವರು ಪ್ರತಿಷ್ಠಿತ ಉದ್ಯಮಿಗಳ ಒಡೆತನದ ಮನೆ, ಕಚೇರಿ, ಆಸ್ಪತ್ರೆ ಹಾಗೂ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಏಕಕಾಲದಲ್ಲಿ ನಡೆಸಿರುವ ದಾಳಿಯಲ್ಲಿ ಭರ್ಜರಿ ಬೇಟೆಯನ್ನೇ ಮಾಡಿದ್ದಾರೆಂಬ ಮಾಹಿತಿ ದೊರಕಿದೆ. ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂ. ನಗದು ಮತ್ತು ಭಾರೀ ಪ್ರಮಾಣದ ಚಿನ್ನ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಓದಿ: ಸಪ್ತಗಿರಿ ಆಸ್ಪತ್ರೆ ಮಾಲೀಕನ ಮನೆ ಮೇಲೆ ಐಟಿ ದಾಳಿ: ಅಧಿಕಾರಿಗಳಿಗೆ ಸಹಕರಿಸದ ಜಿ. ದಯಾನಂದ
ನಗರದ ಎ.ಜೆ. ಗ್ರೂಪ್ ಮಾಲೀಕ ಎ.ಜೆ. ಶೆಟ್ಟಿ, ಯೆನೆಪೊಯ ಸಮೂಹ ಸಂಸ್ಥೆಯ ಯೆನೆಪೊಯ ಅಬ್ದುಲ್ಲಾ ಕುಂಞಿ, ಶ್ರೀನಿವಾಸ ಗ್ರೂಪ್ ಆಫ್ ಎಜ್ಯುಕೇಶನಲ್ ಇನ್ಸ್ಟಿಟ್ಯೂಟ್ನ ಶ್ರೀನಿವಾಸ ರಾವ್, ಕಣಚೂರು ಗ್ರೂಪ್ ಮಾಲೀಕ ಕಣಚೂರು ಮೋನು ಅವರುಗಳ 20ಕ್ಕೂ ಅಧಿಕ ಮನೆ, ಕಚೇರಿ, ಆಸ್ಪತ್ರೆಗಳು ಇನ್ನಿತರ ಸಂಸ್ಥೆಗಳ ಮೇಲೆ ಇಂದು ಬೆಳ್ಳಂಬೆಳಗ್ಗೆ 6 ಗಂಟೆ ಸುಮಾರಿಗೆ ಏಕಕಾಲದಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಅಲ್ಲದೆ ಯೆನೆಪೊಯ ಆಸ್ಪತ್ರೆ ಆಡಳಿತದೊಂದಿಗೆ ವಹಿವಾಟು ಹೊಂದಿರುವ ಅನುಮಾನದ ಮೇರೆಗೆ ಆಸ್ಪತ್ರೆ ವೈದ್ಯರೊಬ್ಬರಿಗೆ ಸೇರಿದ ಮುಲ್ಕಿ ಗೇರುಕಟ್ಟೆಯಲ್ಲಿರುವ ನಿವಾಸದ ಮೇಲೂ ಐಟಿ ಅಧಿಕಾರಿಗಳು ರೇಡ್ ಮಾಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಬೆಂಗಳೂರು ಐಟಿ ಕಚೇರಿ ಸೇರಿದಂತೆ ವಿವಿಧ ರಾಜ್ಯಗಳಿಂದ 250ಕ್ಕೂ ಅಧಿಕ ಐಟಿ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರೆಂಬ ಮಾಹಿತಿ ದೊರಕಿದೆ. ಸೋಮವಾರ ಸಂಜೆಯೇ ಮಂಗಳೂರಿಗೆ ಬಂದಿಳಿದ ಐಟಿ ಅಧಿಕಾರಿಗಳು ಭರ್ಜರಿ ಬೇಟೆಗೆ ಭಾರೀ ತಯಾರಿ ನಡೆಸಿದ್ದರು. ದಾಳಿ ಕಾರ್ಯಾಚರಣೆ ಆರಂಭಿಸಿದ ಬಳಿಕ ಶೇ. 50ರಷ್ಟು ಪೊಲೀಸರ ಭದ್ರತೆ ಪಡೆದುಕೊಂಡಿದ್ದಾರೆ.
ಬೆಳಗ್ಗೆಯಿಂದ ಸರಿ ಸುಮಾರು ರಾತ್ರಿಯವರೆಗೂ ದಾಖಲೆ ಪರಿಶೀಲನೆ, ತನಿಖಾ ಕಾರ್ಯ ನಡೆದಿದೆ. ದಾಳಿ ವೇಳೆ ನಾಲ್ವರೂ ಉದ್ಯಮಿಗಳು ಮನೆಯಲ್ಲೇ ಇದ್ದರು. ಯಾವೊಂದು ಮಾಹಿತಿಯೂ ಇಲ್ಲದೆ ಎಂಟ್ರಿ ನೀಡಿದ ಅಧಿಕಾರಿಗಳನ್ನು ನೋಡಿ ಉದ್ಯಮಿಗಳು ಬೆಚ್ಚಿಬಿದ್ದಿದ್ದಾರೆ. ಬಳಿಕ ಸಾವರಿಸಿಕೊಂಡು ದಾಖಲೆ ಪರಿಶೀಲನೆ, ತನಿಖೆಗೆ ಸಹಕರಿಸಿದ್ದಾರೆ ಎನ್ನಲಾಗಿದೆ.
ಫುಟ್‌ಬಾಲ್ ಚಾಂಪಿಯನ್‌ಶಿಪ್ ನಾಟಕ:
ಮಾಹಿತಿ ಸೋರಿಕೆಯಾಗುವ ಹಿನ್ನೆಲೆ ಸಾಮಾನ್ಯವಾಗಿ ಐಟಿ ಅಧಿಕಾರಿಗಳು ಪೊಲೀಸರ ಭದ್ರತೆ ಪಡೆಯುವುದಿಲ್ಲ. ಆದರೆ ಈ ಪ್ರಕರಣದಲ್ಲಿ ಉದ್ಯಮಿಗಳು ಭಾರೀ ಪ್ರಭಾವಿಗಳಾಗಿದ್ದುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಭದ್ರತೆ ಪಡೆಯಲಾಗಿದೆ. ಕೇವಲ ನಿಷ್ಠಾವಂತ ಪೊಲೀಸರನ್ನು ನಿಯೋಜಿಸಲಾಗಿತ್ತು. ಅಲ್ಲದೆ ಈ ಕಾರ್ಯಾಚರಣೆಗೆ ಐಟಿ ಅಧಿಕಾರಿಗಳು ಫುಟ್ಬಾಲ್ ಚಾಂಪಿಯನ್ಶಿಪ್ನ ಭಾರೀ ನಾಟಕವನ್ನೇ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಮಂಗಳವಾರ ಸಂಜೆಯೇ ಮಂಗಳೂರಿಗೆ ಬಂದಿಳಿದಿದ್ದ 250ಕ್ಕೂ ಅಧಿಕ ಐಟಿ ಅಧಿಕಾರಿಗಳು, ಕೇರಳದಲ್ಲಿ ಅಂತಾರಾಜ್ಯ ಫುಟ್‌ಬಾಲ್ ಚಾಂಪಿಯನ್‌ಶಿಪ್‌ಗೆ ಹೋಗಲಿರುವುದಾಗಿ ಹೇಳಿ ಶೇ. 60ರಷ್ಟು ಇನ್ನೋವಾ ಟ್ಯಾಕ್ಸಿಗಳನ್ನು ಏಜೆನ್ಸಿ ಮುಖಾಂತರ ಬುಕ್ ಮಾಡಿದ್ದರು. ಬೆಳಗ್ಗೆ ಆಟಗಾರರು ಬರಲಿದ್ದಾರೆ, ರೆಡಿಯಾಗಿರಿ ಎಂಬ ಸೂಚನೆಯನ್ನು ಡ್ರೈವರ್‌ಗಳಿಗೆ ನೀಡಲಾಗಿತ್ತು. ಅದರಂತೆ ಟ್ಯಾಕ್ಸಿ ಕಾರುಗಳು ಮುಂಜಾನೆ ಮೊದಲೇ ಸೂಚಿಸಿದ್ದ ಜಾಗಗಳಿಗೆ ಬಂದಿದ್ದವು. ಕಾರುಗಳಿಗೆ ಇಂಟರ್‌ಸ್ಟೇಟ್ ಫುಟ್ಬಾಲ್ ಚಾಂಪಿಯನ್‌ಶಿಪ್ ಸ್ಟಿಕ್ಕರ್ ಅಂಟಿಸಲಾಗಿತ್ತು.
ಶ್ರೀನಿವಾಸ ಗ್ರೂಪ್ ಆಫ್ ಎಜ್ಯುಕೇಶನಲ್ ಇನ್ ಸ್ಟಿಟ್ಯೂಟ್ನ ಶ್ರೀನಿವಾಸ ರಾವ್ ಅವರ ಜೈಲು ರಸ್ತೆಯಲ್ಲಿನ ಮನೆ ಮೇಲೆ ದಾಳಿ ನಡೆಸಿದ ಸಂದರ್ಭ ಅವರ ವೃದ್ಧ ತಂದೆ ರಾಘವೇಂದ್ರ ರಾವ್ ದಿಢೀರ್ ಅಸ್ವಸ್ಥಗೊಂಡ ಘಟನೆ ನಡೆಯಿತು. ತಕ್ಷಣ ಆಂಬ್ಯುಲೆನ್ಸ್ನಲ್ಲಿ ಆಕ್ಸಿಜನ್ ತರಿಸಿ ಚಿಕಿತ್ಸೆ ನೀಡಲಾಯಿತು. ಈ ಘಟನೆಯಿಂದ ಐಟಿ ಅಧಿಕಾರಿಗಳು ಕೆಲಕಾಲ ಆತಂಕಗೊಂಡಿದ್ದರೂ ಚೇತರಿಕೆ ಹೊಂದಿದ ಬಳಿಕ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಕೊರೊನಾ ಸೋಂಕಿನ ಚಿಕಿತ್ಸೆಯ ಹೆಸರಿನಲ್ಲಿ ಲಕ್ಷಾಂತರ ರೂ. ಹಣ ದೋಚಲಾಗಿದೆ ಎಂಬ ಆರೋಪ ಕರಾವಳಿಯ ಖಾಸಗಿ ಆಸ್ಪತ್ರೆಗಳ ಮೇಲಿದೆ. ಸಾಮಾನ್ಯ ಚಿಕಿತ್ಸೆಗೂ ಪ್ರತಿ ಕೊರೊನಾ ರೋಗಿಯಿಂದ 15-16 ಲಕ್ಷ ರೂ. ಕಬಳಿಸಿದ ದಾಖಲೆಗಳು ವೈರಲ್ ಆಗಿದ್ದವು. ಹೀಗೆ ಸಾವಿರಾರು ರೋಗಿಗಳಿಂದ ಹಲವು ಕೋಟಿ ಆಸ್ತಿ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಹಾಗಾಗಿಯೇ ಕೇವಲ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳನ್ನೇ ಗುರಿಯಾಗಿಸಲಾಗಿದೆ ಎನ್ನಲಾಗಿದೆ.