ಮಂಗಳೂರು: ನಗರದಲ್ಲಿ ನಡೆದ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟೀರಿಯಲ್ ತನಿಖೆ ನಡೆಯುತ್ತಿದ್ದು, ಇಂದಿನಿಂದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯ ವಿಚಾರಣೆ ಆರಂಭವಾಗಿದೆ.
ನಗರದ ಮಿನಿ ವಿಧಾನಸೌಧದಲ್ಲಿರುವ ಸಹಾಯಕ ಆಯುಕ್ತರ ಕಚೇರಿಯ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯ ಹಿನ್ನೆಲೆಯಲ್ಲಿ ಇಂದು 29 ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಾಕ್ಷ್ಯ ವಿಚಾರಣೆ ನಡೆದಿದೆ. ಈ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿ ಡಾ.ಜಿ.ಜಗದೀಶ್ ಮಾತನಾಡಿ, ಮಂಗಳೂರು ನಗರ ಪೊಲೀಸ್ ಆಯುಕ್ತರ ಕಡೆಯಿಂದ ಒಟ್ಟು176 ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ವಿಚಾರಣೆಗೆ ಪರಿಗಣಿಸಬೇಕೆಂದು ನನಗೆ ಪಟ್ಟಿ ಬಂದಿದೆ. ಈ ಹಿನ್ನೆಲೆಯಲ್ಲಿ ಇಂದು 29 ಮಂದಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸಾಕ್ಷ್ಯ ವಿಚಾರಣೆಯನ್ನು ಪಡೆದುಕೊಳ್ಳಲಾಗಿದೆ. ಉಳಿದ ಪೊಲೀಸರ ಸಾಕ್ಷಿ ವಿಚಾರಣೆಯನ್ನು ಮಾರ್ಚ್ 9 ಹಾಗೂ 12 ರಂದು ಮಾಡಲಾಗುವುದು ಎಂದು ನೋಟೀಸ್ ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಅವರಿಗೆ ಖುದ್ದು ವಿಚಾರಣೆಗೆ ಹಾಜರಾಗಿ ಹೇಳಿಕೆಗಳನ್ನು ನೀಡಬೇಕೆಂದು ನೋಡಲ್ ಅಧಿಕಾರಿಗಳ ಮೂಲಕ ಸೂಚನೆ ನೀಡಲಾಗಿದೆ. ಅವರಿಗೆ ಮಾರ್ಚ್ 9 ರಂದು ಲಿಖಿತವಾಗಿ ತಿಳಿಸಲಾಗುವುದು ಎಂದು ಡಾ.ಜಿ.ಜಗದೀಶ್ ಹೇಳಿದರು. ಇನ್ನು ಫೆಬ್ರವರಿ 25ರಂದು ಪೊಲೀಸ್ ಅಧಿಕಾರಿಗಳು ಸೇರಿದಂತೆ 12 ಮಂದಿ ಪೊಲೀಸ್ ಸಿಬ್ಬಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟೀರಿಯಲ್ ತನಿಖೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಲಾಗಿತ್ತು.
ಆದರೆ ಅಂದು ಅನಿವಾರ್ಯ ಕಾರಣಗಳಿಂದ ಯಾರೂ ವಿಚಾರಣೆಗೆ ಆಗಮಿಸಿಲ್ಲ. ಆದ್ದರಿಂದ ಅಂದು ಹಾಜರಾಗಬೇಕಿದ್ದ 12 ಮಂದಿ ಸೇರಿ ಒಟ್ಟು 35 ಮಂದಿ ಪೊಲೀಸ್ ಅಧಿಕಾರಿಗಳು ಸೇರಿ, ಸಿಬ್ಬಂದಿಗೆ ನೋಟೀಸ್ ಜಾರಿಗೊಳಿಸಲಾಗಿದೆ. ಆದರೆ ಇಂದು 29ಮಂದಿ ವಿಚಾರಣೆಗೆ ಹಾಜರಾಗಿದ್ದಾರೆ.
ಇನ್ನು ಉಳಿದ ಆರು ಮಂದಿ ಅನಿವಾರ್ಯ ಕಾರಣಗಳಿಂದ ವಿಚಾರಣೆಗೆ ಹಾಜರಾಗಲಿಲ್ಲ. ಮುಂದಿನ ದಿನಗಳಲ್ಲಿ ಅವರು ಖುದ್ದು ಹಾಜರಾಗಿ ಸಾಕ್ಷ್ಯ ಹೇಳಲಿದ್ದಾರೆ ಎಂದು ತಿಳಿಸಿದರು.