ಮಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳೂರು ದಸರಾ ಅಂಗವಾಗಿ ಶ್ರೀ ಕ್ಷೇತ್ರ ಕುದ್ರೋಳಿಗೆ ಭೇಟಿ ನೀಡಿ ಗೋಕರ್ಣನಾಥ ಹಾಗೂ ಪರಿವಾರ ದೇವರುಗಳು ಮತ್ತು ಶ್ರೀ ಶಾರದಾ ಮಾತೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಬಳಿಕ ಮಾತನಾಡಿದ ಸಿಎಂ, ಶ್ರೀ ಕ್ಷೇತ್ರ ಕುದ್ರೋಳಿಗೆ ಭೇಟಿ ನೀಡಿ ನಾಡಿನ ಜನತೆ ಸುಭೀಕ್ಷದಿಂದ, ಸುಖ, ಶಾಂತಿ, ನೆಮ್ಮದಿಯಿಂದ ಇರಲೆಂದು ಪ್ರಾರ್ಥಿಸಿದೆ.
ಈ ಸಂದರ್ಭ ಬಹಳ ಹಿರಿಯ ಹಾಗೂ ಈ ನಾಡು ಕಂಡಿರುವ ಅತ್ಯಂತ ಬದ್ಧತೆಯ ರಾಜಕಾರಣಿ ಜನಾರ್ದನ ಪೂಜಾರಿಯವರನ್ನು ಭೇಟಿಯಾದೆ. ಬಡವರ ಬಗ್ಗೆ ಅತ್ಯಂತ ಕಳಕಳಿ ಇರುವ ವ್ಯಕ್ತಿ. ನನ್ನ ತಂದೆಯವರೊಂದಿಗೂ ಅತ್ಯಂತ ಆತ್ಮೀಯ ಒಡನಾಟ ಇದ್ದಂತವರು.
ಅವರು ನನ್ನನ್ನು ಅತ್ಯಂತ ಪ್ರೀತಿಯಿಂದ, ವಿಶ್ವಾಸದಿಂದ ಹರಸಿದ್ದಾರೆ. ನಾನು ಅವರ ಯೋಗ ಕ್ಷೇಮವನ್ನು, ಆರೋಗ್ಯವನ್ನು ವಿಚಾರಿಸಿದ್ದೇನೆ. ಅವರೂ ನನ್ನ ಬಗ್ಗೆ ಉತ್ತಮ ಕೆಲಸ ಮಾಡುತ್ತೀದ್ದೀರೆಂದು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದರು ಎಂದರು.
ಮಂಗಳೂರು ದಸರಾವನ್ನು ಕಂಡು ಸಂತೋಷವಾಗಿದೆ. ಈ ಬಗ್ಗೆ ಅಧಿಕಾರಿಗಳ ಜತೆ ಮಾತನಾಡಿ, ಮಂಗಳೂರು ದಸಾರಕ್ಕೆ ಏನೆಲ್ಲಾ ಸಹಾಯ, ಸಹಕಾರ ಬೇಕು ಅದನ್ನು ಮಾಡುವ ಪ್ರಯತ್ನ ಮಾಡುತ್ತೇನೆ ಎಂದು ಸಿಎಂ ಹೇಳಿದರು.
ಸಿಆರ್ಝಡ್ ಅನುಷ್ಠಾನಗೊಳ್ಳುವ ವಿಶ್ವಾಸ : ಕೇರಳ ಹಾಗೂ ಗೋವಾ ಮಾದರಿಯ ಸಿಆರ್ಝಡ್ (Coastal Regulation Zone) ಅನ್ನು ಕರ್ನಾಟಕದಲ್ಲೂ ಸ್ಥಾಪಿಸಿದಲ್ಲಿ ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ನೀಡಿದಂತಾಗುತ್ತದೆ ಎಂಬ ದೃಷ್ಟಿಯಿಂದ ಈಗಾಗಲೇ ಪ್ರಸ್ತಾಪವನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಇದು ಅನುಷ್ಠಾನಗೊಳ್ಳುವ ವಿಶ್ವಾಸವಿದೆ.
ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನವೂ ಇದೆ. ಅದೇ ರೀತಿ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸೂಚನೆ ನೀಡಲಾಗಿದೆ. ಅದು ಕೆಲವೇ ದಿನಗಳಲ್ಲಿ ಆಗಲಿದೆ. ಈಗಾಗಲೇ ಮರ್ಡೈಮ್ ಬೋರ್ಡ್ ಮೀಟಿಂಗ್ ಮಾಡಲಾಗಿದೆ.
ಇದರಲ್ಲಿ ಮೀನುಗಾರಿಕಾ ಬಂದರು ಹಾಗೂ ಖಾಸಗಿ ಬಂದರು ಅಭಿವೃದ್ಧಿಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡು ಕೇಂದ್ರ ಸರ್ಕಾರಕ್ಕೆ ಡಿಪಿಆರ್ ಕಳುಹಿಸಲಾಗಿದೆ. ಅದರಲ್ಲಿ ಮೀನುಗಾರಿಕೆಗೆ ಸಹಾಯ ಆಗುವ ರೀತಿ ಮಂಗಳೂರು ಹಾಗೂ ಕಾರವಾರ ಬಂದರು ವಿಸ್ತಾರಣೆ ಕೂಡ ಅದರಲ್ಲೇ ಮಾಡುವ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ: CM ಬಸವರಾಜ ಬೊಮ್ಮಾಯಿ ಉಡುಪಿ ಪ್ರವಾಸ: ಬಂಟಕಲ್ಲು ರಸ್ತೆ ಅಭಿವೃದ್ಧಿಗೆ ಶಂಕುಸ್ಥಾಪನೆ