ಮೂಡುಬಿದಿರೆ: ರಸ್ತೆ ದಾಟಿ ಮತ್ತೊಂದು ಕಡೆ ಓಡುತ್ತಿದ್ದ ಜಿಂಕೆಯೊಂದು ಮನೆ ಎದುರಿನ ಕಬ್ಬಿಣದ ಗೇಟ್ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನಪ್ಪಿದ ಘಟನೆ ಮೂಡಬಿದಿರೆ ತಾಲೂಕಿನ ಮರಿಯಾಡಿಯಲ್ಲಿ ಸಂಭವಿಸಿದೆ.
ಘಟನೆಯಲ್ಲಿ ಮೂರು ವರ್ಷದ ಹೆಣ್ಣು ಜಿಂಕೆ ಮೃತಪಟ್ಟಿದೆ. ಮೂಡಬಿದಿರೆಯ ಮಾರ್ಪಾಡಿ ಕಡೆಯಿಂದ ವೇಗವಾಗಿ ರಸ್ತೆ ದಾಟಿ ಮತ್ತೊಂದು ಕಡೆಗೆ ಓಡುತ್ತಿದ್ದ ವೇಳೆ ಜಿಂಕೆ ಗೇಟ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಜಿಂಕೆಯ ಕುತ್ತಿಗೆ ಹಾಗೂ ಮುಖದ ಭಾಗಕ್ಕೆ ಬಲವಾದ ಏಟು ತಗುಲಿದೆ. ಬಳಿಕ ನೆಲಕ್ಕೆ ಬಿದ್ದು ಸಾವನ್ನಪ್ಪಿದೆ.
ಮೂಡುಬಿದಿರೆ ಪಶುವೈದ್ಯಾಧಿಕಾರಿ ಡಾ.ರವಿ ಕುಮಾರ್ ಜಿಂಕೆಯ ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಶಾಂತ್, ವಲಯ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ ಸಮಕ್ಷಮದಲ್ಲಿ ಅರಣ್ಯ ಕಚೇರಿ ಆವರಣದಲ್ಲಿ ಜಿಂಕೆಯ ಅಂತ್ಯಕ್ರಿಯೆ ನಡೆಸಲಾಯಿತು.
ಪಣಂಬೇರಿ, ಮೂಜಿಮಲೆ ರಾಷ್ಟ್ರೀಯ ಉದ್ಯಾನದಲ್ಲಿ ಜಿಂಕೆಗಳ ಓಡಾಟವಿದ್ದು, ಇಲ್ಲಿಂದ ಜಿಂಕೆ ದಾರಿ ತಪ್ಪಿ ಬಂದಿರಬಹುದೆಂದು ಶಂಕಿಸಲಾಗಿದೆ.