ಮಂಗಳೂರು: ಜಿಲ್ಲೆಯ ಉದ್ಯಮಿ ವಿಜಯೇಂದ್ರ ಭಟ್ ಶೂಟೌಟ್ ಪ್ರಕರಣ ಸೇರಿದಂತೆ ಏಳು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಭೂಗತ ಪಾತಕಿ ವಿಕ್ಕಿ ಶೆಟ್ಟಿ ಸಹಚರನನ್ನು ದಕ್ಷಿಣ ಉಪವಿಭಾಗದ ರೌಡಿ ನಿಗ್ರಹ ದಳ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಿಡ್ಡೆಲ್ ಮರೋಳಿ ನಿವಾಸಿ ದೀಕ್ಷಿತ್ ಪೂಜಾರಿ (31) ಬಂಧಿತ ಆರೋಪಿ.ಭೂಗತ ಪಾತಕಿ ವಿಕ್ಕಿ ಶೆಟ್ಟಿ ಸೂಚನೆಯಂತೆ ಸುಧೀಂದ್ರ, ಸೂಪರ್ ಮಾರ್ಕೆಟ್ ಮತ್ತು ಸಾಯ್ಬಿನ್ ಕಾಂಪ್ಲೆಕ್ಸ್ ಮಾಲಿಕ, ಉದ್ಯಮಿ ವಿಜಯೇಂದ್ರ ಭಟ್ ಅವರು ಬಳ್ಳಾಲ್‌ಬಾಗ್‌ನಲ್ಲಿ ಕಾರಿನಲ್ಲಿದ್ದ ವೇಳೆ ಪಿಸ್ತೂಲಿನಿಂದ ಗುಂಡು ಹೊಡೆದ ಪ್ರಕರಣದಲ್ಲಿ ಆರೋಪಿ ತಲೆಮರೆಸಿಕೊಂಡಿದ್ದ. ಆರೋಪಿಯನ್ನು ಖಚಿತ ಮಾಹಿತಿ ಮೇರೆಗೆ ಮಂಗಳೂರು ದಕ್ಷಿಣ ಎಸಿಪಿ ಟಿ.ಕೋದಂಡರಾಮ್ ನೇತೃತ್ವದಲ್ಲಿ ಬಂಧಿಸಲಾಗಿದೆ.
ಮಂಗಳೂರು ನಗರ ಮತ್ತು ಉಡುಪಿ ಸೇರಿದಂತೆ ಏಳು ಪ್ರಕರಣಗಳಲ್ಲಿ ಆರೋಪಿ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಅಲ್ಲದೇ, ಬರ್ಕೆ ಠಾಣೆಯಲ್ಲಿ ಕೊಲೆ ಪ್ರಕರಣ, ಶೂಟೌಟ್ ಪ್ರಕರಣ ಸೇರಿದಂತೆ, ಪಾಂಡೇಶ್ವರ ಠಾಣೆಯಲ್ಲಿ ಕೊಲೆ , ಮಂಗಳೂರು ಉತ್ತರ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿತ್ತು.
ಅಷ್ಟೇ ಅಲ್ಲದೇ ಮಂಗಳೂರು ಪೂರ್ವ ಠಾಣೆಯಲ್ಲಿ ಗಾಂಜಾ ಮತ್ತು ಹಲ್ಲೆ ಪ್ರಕರಣ, ಸುರತ್ಕಲ್ ಠಾಣೆಯಲ್ಲಿ ಹಲ್ಲೆ , ಉರ್ವ ಠಾಣೆಯಲ್ಲಿ ಹಲ್ಲೆ ಹಾಗೂ ಉಡುಪಿ ಠಾಣೆಯಲ್ಲಿ ಆರ್ಮ್ಸ್ ಆ್ಯಕ್ಟ್ ಮತ್ತು ಕಾವೂರು, ಕದ್ರಿ, ಬರ್ಕೆ ಮತ್ತು ಪಾಂಡೇಶ್ವರ ಠಾಣೆ ಸೇರಿದಂತೆ ಏಳು ಪ್ರಕರಣಗಳಲ್ಲಿ ಆರೋಪಿ ತಲೆಮರೆಸಿಕೊಂಡಿದ್ದ. ಅಲ್ಲದೇ, ಈತನ ವಿರುದ್ಧ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಇದೀಗ ಆರೋಪಿಯನ್ನು ಬಂಧಿಸಿ ಉಳ್ಳಾಲ ಠಾಣೆಗೆ ಹಸ್ತಾಂತರಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ನಿರ್ದೇಶನದಂತೆ ಡಿಸಿಪಿಗಳಾದ ಅರುಣಾಂಕ್ಷು ಗಿರಿ, ಲಕ್ಷ್ಮೀಗಣೇಶ್, ಎಸಿಪಿ ಟಿ.ಕೋದಂಡರಾಮ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ದಕ್ಷಿಣ ರೌಡಿ ನಿಗ್ರಹ ದಳದ ಸಿಬ್ಬಂದಿ ಪಾಲ್ಗೊಂಡಿದ್ದರು.