ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಅಪಘಾತ ಸಂಭವಿಸಿ ಇಂದಿಗೆ 11 ವರ್ಷ ತುಂಬಿದೆ.
2010 ಮೇ 22 ರಂದು ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ದುರಂತದ ಹಿನ್ನೆಲೆ ಇಂದು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ಶೃದ್ದಾಂಜಲಿ ಸಲ್ಲಿಸಲಾಯಿತು.
ಈ ದುರಂತದಲ್ಲಿಕ್ಕೀಡಾಗಿದ್ದ ವಿಮಾನದಲ್ಲಿ 166 ಪ್ರಯಾಣಿಕರಿದ್ದರು. ಅದರಲ್ಲಿ 158 ಮಂದಿ ಸಾವನ್ನಪ್ಪಿ, 8 ಮಂದಿ ಬದುಕುಳಿದಿದ್ದರು. ಇಂದು ದ.ಕ ಜಿಲ್ಲಾಡಳಿತದಿಂದ ವಿಮಾನ ದುರಂತದಲ್ಲಿ ಸಾವನ್ನಪ್ಪಿದವರಿಗೆ ಶೃದ್ದಾಂಜಲಿ ಸಲ್ಲಿಸುವ ಕಾರ್ಯಕ್ರಮ ನಡೆಯಿತು.
ಘಟನೆ ಸಂಭವಿಸಿ ಇಷ್ಟು ವರ್ಷಗಳಾದರೂ ಮಡಿದ ಕುಟಂಬಗಳಿಗೆ ನ್ಯಾಯಯುತವಾದ ಪರಿಹಾರ ಸಿಕ್ಕಿಲ್ಲ ಎಂಬ ಆರೋಪವಿದೆ. ವಿಮಾನ ಅಪಘಾತದಲ್ಲಿ ಮಡಿದವರಿಗೆ ಸಿಗಬೇಕಿದ್ದ ಪರಿಹಾರದ ಮೊತ್ತ ಸಿಗದೆ ಅನ್ಯಾಯವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಕೆಲವರಿಗೆ 35 ಲಕ್ಷ ಪರಿಹಾರ ಸಿಕ್ಕರೆ ಇನ್ನು ಕೆಲವು ಬೆರಳೆಣಿಕೆಯ ಸಂತ್ರಸ್ತರಿಗೆ 7 ಕೋಟಿವರೆಗೆ ಪರಿಹಾರ ದೊರೆತಿದೆ. ಸಾವನ್ನಪ್ಪಿದವರ ಪ್ರಾಯ ಮತ್ತು ಅವರು ಆ ಸಂದರ್ಭದಲ್ಲಿಗಳಿಸುತ್ತಿದ್ದ ಆದಾಯ ಪರಿಗಣಿಸಿ ಪರಿಹಾರ ನೀಡಲಾಗಿದ್ದರೂ ಅದು ನ್ಯಾಯಯುತವಾಗಿ ನೀಡಲಾಗಿಲ್ಲ ಎಂಬ ಆರೋಪವಿದೆ.
ದುಬೈನಿಂದ ಬಂದ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ರನ್ ವೇ ಯಲ್ಲಿ ನಿಲ್ಲದೆ ಸೂಚನ ಗೋಪುರದ ಕಂಬಗಳಿಗೆ ಡಿಕ್ಕಿಯಾಗಿ ಅದನ್ನು ತುಂಡರಿಸಿ ಆಳ ಪ್ರದೇಶಕ್ಕೆ ಉರುಳಿ ಈ ದುರ್ಘಟನೆ ಸಂಭವಿಸಿತ್ತು.