ಬಂಟ್ವಾಳ: ಬಂಟ್ವಾಳ ತಾಲೂಕಿನ ವಿಟ್ಲಪಡ್ನೂರು ಗ್ರಾಮದ ಕೊಡಂಗೆ ಬನಾರಿ ಎಂಬಲ್ಲಿ ಅಣ್ಣನನ್ನೇ ತಮ್ಮ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ಘಟನೆ ನಡೆದಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![ಹತ್ಯೆ ನಡೆದಿರುವ ಮನೆಯಲ್ಲಿ ಪರಿಶೀಲನೆ ನಡೆಸುತ್ತಿರುವ ಪೊಲೀಸ್ ಸಿಬ್ಬಂದಿ](https://etvbharatimages.akamaized.net/etvbharat/prod-images/kn-mng-bantwal-02-bantwal-photo-kac10019_14092022154714_1409f_1663150634_522.jpg)
ಮಂಗಳವಾರ (ಸೆ. 13ರ) ರಾತ್ರಿ ಘಟನೆ ನಡೆದಿದ್ದು, ಕೊಡಂಗೆ ಬನಾರಿ ಮನೆಯ ಶೀನಪ್ಪ ದೇವಾಡಿಗ ಅವರ ಪುತ್ರ ಗಣೇಶ್ ಬಂಗೇರ (54) ಸಾವನ್ನಪ್ಪಿದವರು. ಅವರ ಸಹೋದರ ಪದ್ಮನಾಭ ಬಂಗೇರ (49) ಆರೋಪಿ. ಪದ್ಮನಾಭ ಬಂಗೇರ ತನ್ನ ಅಣ್ಣ ಗಣೇಶ್ ಬಂಗೇರನಿಗೆ ಯಾವುದೋ ದ್ವೇಷದಿಂದ ಆಗಾಗ ಹಲ್ಲೆ ನಡೆಸುತ್ತಿದ್ದ. ಅಲ್ಲದೇ ಗಣೇಶನನ್ನು ಕೊಲ್ಲುವುದಾಗಿ ಕೂಡ ಹೇಳಿರುತ್ತಾರೆ.
ಆದರೆ, ಈ ರೀತಿ ರಾತ್ರಿ ಸಮಯದಲ್ಲಿ ಪದ್ಮನಾಭ ಬಂಗೇರ ಅವರು ಗಣೇಶ್ ಬಂಗೇರ ಅವರನ್ನು ತಲೆ, ಎದೆ ಹಾಗೂ ಮುಖಕ್ಕೆ ಯಾವುದೋ ಆಯುಧದಿಂದ ಕೊಲೆ ಮಾಡುವ ಉದ್ದೇಶದಿಂದ ಮಾರಣಾಂತಿಕವಾಗಿ ಹೊಡೆದು ಗಾಯಗೊಳಿಸಿ ಕೊಂದಿದ್ದಾರೆ. ಆ ಬಳಿಕ ಮೃತದೇಹದ ಬಟ್ಟೆಗಳನ್ನು ಹಾಗೂ ಮೃತ ದೇಹವನ್ನು ಸ್ವಚ್ಛಗೊಳಿಸಿ ಮಲಗುವ ಕೋಣೆಯ ಮಂಚದ ಮೇಲೆ ಮಲಗಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣ ವಿವರ: ಸಹೋದರರಿಬ್ಬರೂ ತಾಯಿ ಕಮಲಮ್ಮ ಅವರೊಂದಿಗೆ ವಾಸವಾಗಿದ್ದು, ಸೆ. 13ರ ತಡರಾತ್ರಿ ಕುಡಿತದ ಅಮಲಿನಲ್ಲಿ ಪದ್ಮನಾಭ ಬಂಗೇರ, ಗಣೇಶನ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿ ಕೊಲೆ ಮಾಡಿರುವುದಾಗಿ ಆಪಾದಿಸಲಾಗಿದೆ.
ಸಹೋದರರಿಬ್ಬರೂ ವಿವಾಹವಾಗಿದ್ದರೂ ಪತ್ನಿಯರು ಅವರೊಂದಿಗೆ ವಾಸವಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಹೆಚ್ಚುವರಿ ಎಸ್ಪಿ ಕುಮಾರ್ ಚಂದ್ರ, ವಿಟ್ಲ ಇನ್ಸ್ಪೆಕ್ಟರ್ ನಾಗರಾಜ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕಾಗಮಿಸಿ, ಮಾಹಿತಿ ಸಂಗ್ರಹಿಸಿದ್ದಾರೆ.
ಓದಿ: ನಡುರಸ್ತೆಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ: ಬೆಂಗಳೂರಲ್ಲಿ ಐವರು ಆರೋಪಿಗಳ ಬಂಧನ