ಮಂಗಳೂರು: ತುಂಡಾಗಿ ಬಿದಿದ್ದ ವಿದ್ಯುತ್ ತಂತಿ ತುಳಿದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಮಂಗಳೂರು ತಾಲೂಕಿನ ಸುರತ್ಕಲ್ ಹೋಬಳಿಯ ಕುಳಾಯಿ ಗ್ರಾಮದಲ್ಲಿ ನಡೆದಿದೆ. ಸಂತೋಷ್ (34) ಮೃತ ದುರ್ದೈವಿ. ಭಾರಿ ಮಳೆಗೆ ವಿದ್ಯುತ್ ತಂತಿ ತುಂಡಾಗಿ ಕೆಳಗೆ ಬಿದಿದ್ದು, ಮುಂಜಾನೆ ಕೈಗಾರಿಕಾ ಪ್ರದೇಶದಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಸಂತೋಷ್ ವಿದ್ಯುತ್ ತಂತಿ ತುಳಿದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಮೃತನ ಕುಟುಂಬಸ್ಥರಿಗೆ ಮೆಸ್ಕಾಂ ಇಲಾಖಾ ವತಿಯಿಂದ 5 ಲಕ್ಷ ರೂ. ಪರಿಹಾರ ಪಾವತಿಸಲು ಕ್ರಮವಹಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಮಂಗಳೂರಿನಲ್ಲಿ ಮಳೆಗೆ ಗುಡ್ಡ ಕುಸಿತ: ಭಾರಿ ಮಳೆಗೆ ಗುಡ್ಡ ಕುಸಿದಿರುವ ಘಟನೆ ಮಂಗಳೂರು ನಗರದ ಪಿವಿಎಸ್ ಬಳಿ ನಡೆದಿದೆ. ಪಿವಿಎಸ್ ನಿಂದ ಕೆ.ಎಸ್ ರಾವ್ ರೋಡ್ಗೆ ಸಂಪರ್ಕ ಕಲ್ಪಿಸುವ ಒಳ ರಸ್ತೆಯಲ್ಲಿ ಗುಡ್ಡ ಕುಸಿದಿದೆ. ಗುಡ್ಡ ಕುಸಿತದಿಂದ ಹಳೆಯ ಕಟ್ಟಡವೊಂದಕ್ಕೆ ಅಪಾಯ ಉಂಟಾಗಿದೆ. ಸಂಪರ್ಕ ರಸ್ತೆಯ ಪಕ್ಕದಲ್ಲೇ ಗುಡ್ಡ ಕುಸಿದಿದೆ. ಈ ರಸ್ತೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಸಂಚರಿಸುತ್ತಾರೆ. ಇದೀಗ ಗುಡ್ಡ ಕುಸಿತವಾದ ಸ್ಥಳಕ್ಕೆ ಟಾರ್ಪಲ್ ಹೊದಿಕೆ ಹಾಕಲಾಗಿದೆ.
ಬೃಹತ್ ಹೋರ್ಡಿಂಗ್ಸ್ ಬಿದ್ದು ವಾಹನಗಳು ಜಖಂ: ಗಾಳಿ, ಮಳೆಗೆ ಬೃಹತ್ ಹೋರ್ಡಿಂಗ್ಸ್ ಬಿದ್ದು ವಾಹನಗಳು ಜಖಂಗೊಂಡಿರುವ ಘಟನೆ ನಗರದ ಬಿಕರ್ನಕಟ್ಟೆಯಲ್ಲಿ ನಡೆದಿದೆ. ಘಟನೆಯಲ್ಲಿ ಹೋರ್ಡಿಂಗ್ಸ್ ಅಡಿಭಾಗದಲ್ಲಿ ನಿಲ್ಲಿಸಿದ್ದ 12ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ. ಮಂಗಳೂರಿನಲ್ಲಿ ಎರಡು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಗೆ ರಸ್ತೆ ಬದಿ ಹಾಕಿರುವ ಖಾಸಗಿ ಹೋರ್ಡಿಂಗ್ಸ್ ಧರೆಗುರುಳುತ್ತಿವೆ.
ಭಾರಿ ಮಳೆ ಹಿನ್ನೆಲೆ ಜಿಲ್ಲಾಧಿಕಾರಿಗಳಿಂದ ನಗರ ಪ್ರದಕ್ಷಿಣೆ: ಮಂಗಳೂರು ನಗರದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಇಂದು ನಗರ ಪ್ರದಕ್ಷಿಣೆ ಕೈಗೊಂಡಿದ್ದರು. ನಗರದ ಪಂಪ್ವೆಲ್, ಉಜ್ಜೋಡಿ, ಗೋರಿಗುಡ್ಡೆ, ಎಕ್ಕೂರು, ನೇತ್ರಾವತಿ ಬ್ರಿಡ್ಜ್, ನಂತೂರು, ಕೆಪಿಟಿ ವೃತ್ತ ಸೇರಿದಂತೆ ವಿವಿಧೆಡೆ ಸಂಚರಿಸಿ ಮಳೆಯಿಂದ ಉಂಟಾದ ಹಾನಿಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಅವರೊಂದಿಗೆ ಮಂಗಳೂರು ಮಹಾನಗರ ಪಾಲಿಕೆ ಇಂಜಿನಿಯರ್‌ಗಳು ಸೇರಿದಂತೆ ಇತರ ಅಧಿಕಾರಿಗಳು ಜೊತೆಗಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ -ಕಾಲೇಜುಗಳಿಗೆ ರಜೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ - ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಆದೇಶಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ರಜೆ ಘೋಷಿಸಿದ್ದಾರೆ.
ಅಲ್ಲದೇ ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಜಾಗ್ರತೆ ವಹಿಸಲು ಮುನ್ಸೂಚನೆ ನೀಡಿದ್ದಾರೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು. ಜೊತೆಗೆ ಪ್ರವಾಸಿಗರು ಹಾಗೂ ಸಾರ್ವಜನಿಕರು ನದಿತೀರಕ್ಕೆ, ಸಮುದ್ರತೀರಕ್ಕೆ ತೆರಳದಂತೆ ಸೂಚನೆ ನೀಡಿದ್ದಾರೆ.
ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರತಕ್ಕದ್ದು ಹಾಗೂ ವಿಪತ್ತು ನಿರ್ವಹಣೆಯನ್ನು ಚಾಚೂ ತಪ್ಪದೇ ಕಡ್ಡಾಯವಾಗಿ ನಿರ್ವಹಿಸುವುದು. ಜಿಲ್ಲಾಡಳಿತದಿಂದ ವಿವಿಧ ಪ್ರದೇಶಗಳಿಗೆ ನೇಮಿಸಲಾಗಿರುವ ನೋಡಲ್ ಅಧಿಕಾರಿಗಳು ಸದಾ ಜಾಗೃತರಾಗಿದ್ದು, ಸಾರ್ವಜನಿಕ ದೂರುಗಳಿಗೆ ತಕ್ಷಣ ಸ್ಪಂದಿಸಬೇಕು. ಜಿಲ್ಲಾಧಿಕಾರಿ ಕಚೇರಿ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ಸೂಚಿಸಲಾಗಿದೆ.
ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಪ್ರತೀ ತಾಲೂಕುಗಳಲ್ಲಿ ಕಾಳಜಿ ಕೇಂದ್ರವನ್ನು ತೆರೆದು ಸನ್ನದ್ಧ ಸ್ಥಿತಿಯಲ್ಲಿರಿಸಿಕೊಳ್ಳುವುದು ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ 1077/ 0824 2442590 ದೂರವಾಣಿಯನ್ನು ಸಂಪರ್ಕಿಸುವಂತೆ ದ.ಕ ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಚರ್ಮುರಿ ಅಂಗಡಿಗಳು ಸಮುದ್ರಪಾಲು: ಉಳ್ಳಾಲ ಹಾಗೂ ಉಚ್ಚಿಲ ಭಾಗದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಉಳ್ಳಾಲ ಬೀಚ್ ಬಳಿ ಹಾಕಲಾಗಿದ್ದ ಚರ್ಮುರಿ ಅಂಗಡಿಗಳು ಸಮುದ್ರಪಾಲಾಗಿದೆ. ಉಚ್ಚಿಲ ಭಾಗದಲ್ಲಿ ಸಮುದ್ರ ತೀರದ ಮನೆಗಳಿಗೆ ಅಪ್ಪಳಿಸಿ, ಹಲವು ಮರಗಳು ಸಮುದ್ರಪಾಲಾಗಿವೆ. ಸಮುದ್ರತೀರದಲ್ಲಿ 80 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಭಾರೀ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ.
ಮೋರಿ ದಾಟುವವಾಗ ವ್ಯಕ್ತಿ ಸಾವು, ಮೃತನ ಕುಟುಂಬಕ್ಕೆ 5 ಲಕ್ಷ ಪರಿಹಾರ: ಉಳ್ಳಾಲ ತಾಲೂಕಿನ ಪಿಲಾರು ಎಂಬಲ್ಲಿ ಮನೆ ಸಮೀಪದ ಮೋರಿ ದಾಟುವ ಸಂದರ್ಭ ಆಯತಪ್ಪಿ ಬಿದ್ದು, ಮಳೆ ನೀರಿಗೆ ಕೊಚ್ಚಿ ಹೋಗಿ ಉಸಿರುಗಟ್ಟಿ ಸಾವನ್ನಪ್ಪಿದ್ದ ಸುರೇಶ್ ಗಟ್ಟಿ ಅವರ ಕುಟುಂಬಸ್ಥರಿಗೆ, ಪ್ರಾಕೃತಿಕ ವಿಕೋಪದಡಿ ರೂ.5 ಲಕ್ಷ ಪರಿಹಾರವನ್ನು ಕಂದಾಯ ಇಲಾಖೆ ನೀಡಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪ್ರಭಾಕರ್ ಖರ್ಜುರೆ, ಕಂದಾಯ ನಿರೀಕ್ಷಕ ಮಂಜುನಾಥ್ ಕೆ.ಹೆಚ್, ಪುರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹದ ಮಹಜರು ವರದಿಯನ್ನು ಸಂಗ್ರಹಿಸಿ, ಮೃತ ಪ್ರಮಾಣ ಪತ್ರವನ್ನು ಸರ್ಕಾರಕ್ಕೆ ತಲುಪಿಸಿ ಪರಿಹಾರ ಧನವನ್ನು ಖಜಾನೆ 2 ಮುಖೇನ ಪತ್ನಿ ಶಾಂಭ ಅವರಿಗೆ ನೀಡಿದೆ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ವರುಣನ ಆರ್ಭಟಕ್ಕೆ ನೆಲಕಚ್ಚಿದ ಮರಗಳು: ಇನ್ನೂ ಮೂರು ದಿನ ಜಿಲ್ಲಾದ್ಯಂತ ಭಾರಿ ಮಳೆ..