ಮಂಗಳೂರು: ಉಳ್ಳಾಲದ ಜನರಿಗೆ ಮುಸಲ್ಮಾನರಲ್ಲವದರನ್ನು ಎಂಎಲ್ಎ ಮಾಡುವ ತಾಕತ್ತಿದೆಯಾ ಎಂದು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರು ಸವಾಲೆಸೆದಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಹಿಂದೂಗಳು ಜಾಸ್ತಿ ಜನರಿರುವಲ್ಲಿ ಹಿಂದೂಗಳಲ್ಲದವರೂ ಎಂಎಲ್ಎ ಆಗುತ್ತಾರೆ. ಆದರೆ ಉಳ್ಳಾಲದಲ್ಲಿ ಯಾಕೆ ಪದೇಪದೆ ಮುಸ್ಲಿಮರೇ ಶಾಸಕರಾಗುತ್ತಿದ್ದಾರೆ. ಪಾಕಿಸ್ತಾನದಲ್ಲಿ ಈ ರೀತಿ ಮುಸ್ಲಿಮರೇ ಶಾಸಕರಾಗುತ್ತಾರೆ. ಇದೇ ಸ್ಥಿತಿ ಉಳ್ಳಾಲದಲ್ಲೂ ನಿರ್ಮಾಣವಾಗುತ್ತಿದೆ. ಉಳ್ಳಾಲ ಪಾಕಿಸ್ತಾನವಾಗುತ್ತಿದೆಯೇ? ಎಂಬ ಭಯ ನಿರ್ಮಾಣವಾಗಿದೆ. ಅಲ್ಲಿನ ಹಿಂದೂಗಳು ಭಯಭೀತರಾಗಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ವಿಭಜನೆಯಾಗುವ ಮೊದಲು ಭಾರತೀಯರಾಗಿದ್ದ ಪಾಕಿಸ್ತಾನದ ಜನರ ಮಾನಸಿಕತೆ ವಿಭಜನೆಯ ಬಳಿಕ ಬದಲಾಯಿತು. ಆ ಭೂಮಿ ಕೆಂಪಾಯಿತು. ಸಿಂಧೂ ನದಿಯಲ್ಲಿ ರಕ್ತ ಹರಿಯಿತು. ಅಲ್ಲಿಯವರೇ ಹಿಂದೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಿದರು. ದೇವಸ್ಥಾನಗಳನ್ನು ಪುಡಿ ಮಾಡಿದರು, ಹಿಂದೂಗಳಿಗೆ ಬದುಕಲು ಕಷ್ಟವಾಗುವ ಸ್ಥಿತಿ ಅಲ್ಲಿ ನಿರ್ಮಾಣ ಮಾಡಲಾಯಿತು. ಇದೇ ವಾತಾವರಣ ಇಂದು ಉಳ್ಳಾಲದಲ್ಲಿ ಕಂಡು ಬರುತ್ತಿದೆ. ಅದಕ್ಕೋಸ್ಕರ ನಾನು ಉಳ್ಳಾಲವನ್ನು ಪಾಕಿಸ್ತಾನ ಎಂದು ಹೇಳಿದ್ದು, ಈ ಬಗ್ಗೆ ನನಗೆ ಪಶ್ಚಾತ್ತಾಪವಿಲ್ಲ. ಹಿಂದೂ ಹುಡುಗರ ಮೇಲೆ ಬೈಕ್ಗಳಲ್ಲಿ ಬಂದು ಚೂರಿ ಇರಿತ ನಡೆಸಲಾಗುತ್ತಿತ್ತು. ಆದ್ದರಿಂದ ಉಳ್ಳಾಲ ಪಾಕಿಸ್ತಾನವಲ್ಲದೆ ಮತ್ತಿನ್ನೇನು ಎಂದು ತಮ್ಮ ಮಾತನ್ನು ಸಮರ್ಥಿಸಿಕೊಂಡರು.
ವಿವಾದಿತ ಗೋಡೆ ಬರಹಗಳನ್ನು ಬರೆಯುವ, ದೇಶದ್ರೋಹ, ಧರ್ಮದ್ರೋಹದ ಕೆಲಸ ಮಾಡುವ ಅವರ ಜನರನ್ನು ಉಳ್ಳಾಲದ ಶಾಸಕರು ಮೊದಲು ಸರಿಪಡಿಸಲಿ. ಅದು ಆದಾಗ ಮಾತ್ರ ಇಲ್ಲಿ ಬೇಧ ಭಾವಗಳು ಇಲ್ಲದಾಗುತ್ತದೆ. ನಮಗೆ ಕ್ರಿಶ್ಚಿಯನ್-ಮುಸ್ಲಿಮರೆಂಬ ಭಾವನೆಗಳಿಲ್ಲ. ಅವರಿಗೆ ಮಾತ್ರ ಇವರು ಹಿಂದೂಗಳು, ಬೇರೆ ಎಂಬ ಭಾವನೆ ಇದೆ ಎಂದರು.
ಇದನ್ನೂ ಓದಿ: ಮಂಗಳೂರು: ಯುವಕನಿಗೆ ಚೂರಿ ಇರಿದ ಮೂವರು ಆರೋಪಿಗಳು ಅಂದರ್