ಬೆಳ್ತಂಗಡಿ (ದ.ಕ): ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ರಾಜ್ಯಾಧ್ಯಕ್ಷರ, ಪದಗ್ರಹಣ ಕಾರ್ಯಕ್ರಮ ಇದೇ ಜುಲೈ 2ರಂದು ರಾಜ್ಯ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸೀಮಿತ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್‌ಕುಮಾರ್ ತಿಳಿಸಿದರು.
ಈ ಕಾರ್ಯಕ್ರಮವು ರಾಜ್ಯದಾದ್ಯಂತ ಬೇರೆ ಬೇರೆ ಕಡೆಗಳಲ್ಲಿ ಟಿವಿ ಪರದೆಯ ಮೂಲಕ ಈ ಕಾರ್ಯಕ್ರಮವನ್ನು ನೋಡುವಂತಹ ವ್ಯವಸ್ಥೆಯನ್ನು ಮಾಡಲಾಗುವುದು, ಅದಲ್ಲದೆ ರಾಜ್ಯ ಕಾಂಗ್ರೆಸ್ ಪಕ್ಷದ ಕಚೇರಿ ಹಾಗೂ ಇನ್ನಿತರ ರಾಜ್ಯದ ಎಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಗಳಲ್ಲಿ ಏಕಕಾಲದಲ್ಲಿ ದೀಪ ಬೆಳಗುವ ಮೂಲಕ ಈ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ನಂತರ ನೂತನ ಅಧ್ಯಕ್ಷರು ಸಂವಿಧಾನದ ಪೀಠಿಕೆ ಓದುವ ಮೂಲಕ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ.
ಅದಲ್ಲದೆ ಈ ಸಂದರ್ಭದಲ್ಲಿ ರಾಜ್ಯದ 10ರಿಂದ 12 ಲಕ್ಷ ಕಾರ್ಯಕರ್ತರು ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದು ವಿಶಿಷ್ಟ ರೀತಿಯಲ್ಲಿ ನೂತನ ತಂತ್ರಜ್ಞಾನದೊಂದಿಗೆ ಬಹುಷಃ ದೇಶದಲ್ಲೇ ಪ್ರಥಮವಾಗಿ ಇಂತಹ ಕಾರ್ಯಕ್ರಮ ನಡೆಯಲಿದೆ. ಇಡೀ ದೇಶ ಕೊರೊನಾದಿಂದ ತತ್ತರಿಸುತ್ತಿದೆ ಕೊರೊನಾ ತಡೆಗಟ್ಟುವಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಸಂಪೂರ್ಣ ವಿಫಲವಾಗಿದೆ. ಕೊರೊನಾ ದೇಶದಲ್ಲಿ ಹರಡಲು ನಮಸ್ತೆ ಟ್ರಂಪ್ ಕಾರ್ಯಕ್ರಮ ಕಾರಣವೇ ಹೊರತು ಬೇರೆನಲ್ಲ ಎಂದರು.
ಇದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಅದ್ದರಿಂದ ಬಿಜೆಪಿ ಸರ್ಕಾರಗಳಿಗೆ ನಾನು ವಿನಂತಿ ಮಾಡುವುದೇನೆಂದರೆ ಕಾಂಗ್ರೆಸ್ ಮುಕ್ತ ಭಾರತ ಮಾಡುವ ಮೊದಲು ಕೊರೊನಾ ಮುಕ್ತ ಭಾರತ ಮಾಡಲು ಮನವಿ ಮಾಡುತ್ತೇನೆ ಎಂದರು.
ತಾಲೂಕಿನ ಹಲವೆಡೆ ಡೆಂಗ್ಯೂ ಪ್ರಕರಣ ಹೆಚ್ಚಾಗುತ್ತಿದ್ದು ಜಿಲ್ಲಾಡಳಿತ ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಬೇಕು, ಕೊರೊನಾ ತಡೆಗಟ್ಟುವಲ್ಲಿ ಜಿಲ್ಲಾಡಳಿತ ಕೂಡ ಸಂಪೂರ್ಣ ವಿಫಲವಾಗಿದೆ. ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಅವಕಾಶ ಮಾಡಿಕೊಟ್ಟಿರುವುದರಿಂದ ಉಳಿದ ರೋಗಿಗಳು ಆಸ್ಪತ್ರೆಗಳಿಗೆ ಹೋಗಲು ಹಿಂಜರಿಯುತ್ತಾರೆ. ಇದರಿಂದ ಬಡ ಜನರಿಗೆ ತುಂಬಾ ತೊಂದರೆ ಆಗುತ್ತಿದೆ ಅದ್ದರಿಂದ ಕೆಲವು ಆಸ್ಪತ್ರೆಗಳನ್ನು ಕೊರೊನಾ ರೋಗಿಗಳಿಗೆ ಮೀಸಲಿಡದೆ ಇನ್ನಿತರಿಗೆ ಮೀಸಲಿಡಬೇಕು ಎಂದರು.
ಮಾಜಿ ಶಾಸಕ ವಸಂತ ಬಂಗೇರ ಮಾತನಾಡಿ, ಕಾಂಗ್ರೆಸ್ ಮುಕ್ತ ಬೆಳ್ತಂಗಡಿ, ಅಥವಾ ಬಿಜೆಪಿ ಮುಕ್ತ ಬೆಳ್ತಂಗಡಿ ಮಾಡಲು ನಮ್ಮಿಂದ ಸಾಧ್ಯ ಇಲ್ಲ, ಅದರೆ ಮುಂದಿನ ದಿನಗಳಲ್ಲಿ ಬಿಜೆಪಿಯವರೇ ಬಿಜೆಪಿ ಮುಕ್ತ ಬೆಳ್ತಂಗಡಿ ಮಾಡಲಿದ್ದಾರೆ ಎಂದರು. ಬೆಳ್ತಂಗಡಿ ನಗರ ಪಂಚಾಯತ್ ಮನೆ ಹಾಗೂ ಕಟ್ಟಡ ತೆರಿಗೆ ದುಪ್ಪಟ್ಟು ಹೆಚ್ಚಿಸಿದೆ, ಈ ಸಂಕಷ್ಟದ ಸಮಯದಲ್ಲಿ ತೆರಿಗೆ ಹೆಚ್ಚಿಸಿದ್ದು ಖಂಡನೀಯ, ಈ ಬಗ್ಗೆ ಪರಿಶೀಲಿಸಬೇಕು ಎಂದರು.
ಬಿಜೆಪಿ ಎಪಿಎಂಸಿ ಸದಸ್ಯ ಆನಂದ ನಾಯ್ಕ ಕಾಂಗ್ರೆಸ್ ಪಕ್ಷದ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಸ್ವಾಗತಿಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ರಂಜನ್ ಜಿ ಗೌಡ, ಶೈಲೇಶ್ ಕುಮಾರ್, ಕುರ್ತೋಡಿ, ವಸಂತ ಬಿ.ಕೆ ಉಪಸ್ಥಿತರಿದ್ದರು.