ಮಂಗಳೂರು: 19 ವರ್ಷದ ಯುವಕನೋರ್ವ ನಡೆದುಕೊಂಡೇ ವಿಶ್ವ ಪರ್ಯಟನೆ ಮಾಡಲು ಮುಂದಾಗಿದ್ದು, ಅತ್ಯಂತ ಶೀತ ಪ್ರದೇಶವಾಗಿರುವ ಸೈಬೀರಿಯಾದ ಓಯ್ ಮ್ಯಾಕ್ರೋನ್ ತಲುಪುವ ಗುರಿ ಹೊಂದಿದ್ದಾನೆ.
ಮಹಾರಾಷ್ಟ್ರ ನಾಗ್ಪುರದ 19 ವರ್ಷದ ರೋಹನ್ ಅಗರ್ವಾಲ್ ಎಂಬ ಯುವಕ ಕಾಲ್ನಡಿಗೆಯಲ್ಲೆ ದೇಶ ಸುತ್ತುತ್ತಿದ್ದಾನೆ. ಈ ಯುವಕ ಅಕ್ಟೋಬರ್ 25, 2020 ರಂದು ವಾರಣಾಸಿಯಿಂದ ಪ್ರಯಾಣ ಆರಂಭಿಸಿದ್ದ. ಕಳೆದ 14 ತಿಂಗಳಲ್ಲಿ ಹರಿಯಾಣ, ನವದೆಹಲಿ, ಉತ್ತರಾಖಂಡ, ಹಿಮಾಚಲಪ್ರದೇಶ, ರಾಜಸ್ಥಾನ, ಚಂಡಿಘಡ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಪಾಂಡಿಚೇರಿ, ಕೇರಳ, ಕರ್ನಾಟಕ, ಗೋವಾದ ಮೂಲಕ ನಡೆದುಕೊಂಡು ಇದೀಗ ಮಂಗಳೂರು ತಲುಪಿದ್ದಾನೆ.
ಸೈಬೀರಿಯಾ ಹೋಗುವ ಯೋಚನೆ ಈತನಲ್ಲಿದ್ದು, ಆದರೆ ಇದಕ್ಕೆ ಬೇಕಾದಂತಹ ಯಾವುದೇ ಯೋಜನೆ ಮಾಡಿಲ್ಲ. ನಿತ್ಯ 20 ರಿಂದ 30 ಕಿ.ಮೀ. ನಡೆಯುವ ಈತ ಕೆಲವೊಮ್ಮೆ ವಾಹನಗಳಿಗೆ ಕೈ ತೋರಿಸಿ 50-100 ಕಿ.ಮೀ. ದೂರವನ್ನು ಕ್ರಮಿಸುತ್ತಾನೆ. ಬಾಂಗ್ಲಾ, ಭೂತಾನ್, ನೇಪಾಳ, ಮ್ಯಾನ್ಮಾರ್, ಥಾಯ್ಲೆಂಡ್, ಕಾಂಬೋಡಿಯಾ, ಲಾವೋಸ್, ವಿಯೆಟ್ನಾಮ್, ಚೀನಾ, ಮುಂಗೋಲಿಯಾ, ರಷ್ಯಾ, ಸೈಬೀರಿಯಾ ತೆರಳುವ ಯೋಚನೆ ಮಾಡಿದ್ದಾನೆ.
ದ್ವಿತೀಯ ಬಿಕಾಂ ನಲ್ಲಿ ಕಾಲೇಜು ಬಿಟ್ಟ ಈತ, ಮನೆಯವರನ್ನು ಒಪ್ಪಿಸಿ ದೇಶಯಾತ್ರೆಗೆ ಹೊರಟಿದ್ದಾನೆ. ಆನ್ಲೈನ್ನಿಂದ ದುಡಿದ 2,500 ರೂ ನಗದು, ಕೆಲವು ಬಟ್ಟೆ, ಎರಡು ಪವರ್ ಬ್ಯಾಂಕ್, ನೀರಿನ ಬಾಟಲ್, ಮೊಬೈಲ್ ಪೋನ್, ವೀಡಿಯೋ ಮಾಡಲು ಟ್ರೈಪಾಡ್ ಹಿಡಿದುಕೊಂಡು ದೇಶ ಸುತ್ತುತ್ತಿದ್ದಾನೆ.
ನಾನಾಗಿಯೇ ಜನರಲ್ಲಿ ಏನನ್ನು ಕೇಳಿ ಪಡೆಯುವುದಿಲ್ಲ. ಜನರು ಪ್ರೀತಿಯಿಂದ ಕೊಟ್ಟ ವಸ್ತುಗಳನ್ನು ಸ್ವೀಕರಿಸಿ ಮುಂದೆ ಸಾಗುತ್ತಿದ್ದೇನೆ. ನಿತ್ಯ ನಡೆದುಕೊಂಡು ಹೋಗುವಾಗ ಪಡೆಯುವ ಅನುಭವವೇ ನನಗೆ ಪಾಠ. ಇದರಿಂದ ಹೊಸ ಹೊಸ ವಿಷಯಗಳನ್ನು ಕಲಿಯುತ್ತಿದ್ದೇನೆ. ಇಂಗ್ಲೀಷ್, ಹಿಂದಿ, ಮರಾಠಿ ಮಾತ್ರ ಮೊದಲು ಬರುತ್ತಿತ್ತು. ಇದೀಗ ನಡೆದುಕೊಂಡು ಹೋಗುತ್ತಾ ರಾಜಸ್ಥಾನಿ, ಮಲಯಾಳಂ, ಪಂಜಾಬಿ ಮೊದಲಾದ ಭಾಷೆಯನ್ನು ಅರ್ಥೈಸಿಕೊಳ್ಳುತ್ತಿದ್ದೇನೆ ಎಂದು ಈಟಿವಿ ಭಾರತಕ್ಕೆ ಅನುಭವ ಹಂಚಿಕೊಂಡಿದ್ದಾನೆ ಈ ಯುವಕ.
ದೇವಸ್ಥಾನ, ಆಶ್ರಮ, ಮಸೀದಿ, ಚರ್ಚ್, ಗುರುದ್ವಾರ ಮೊದಲಾದೆಡೆ ಮಲಗಿ ರಾತ್ರಿ ಕಳೆಯುವ ಈ ಯುವಕ ಕಲೆ, ವಿನ್ಯಾಸ, ಸಂಸ್ಕೃತಿ ದಾಖಲಿಸಿಕೊಳ್ಳುತ್ತಾ ಮುಂದೆ ಮುಂದೆ ಸಾಗುತ್ತಿದ್ದಾನೆ. ಹೀಗೆ ನಡೆದಾಡಿಕೊಂಡೇ ದೇಶ ಸುತ್ತಿ ಜ್ಞಾನಾರ್ಜನೆ ಪಡೆಯುವ ಉದ್ದೇಶ ಹೊಂದಿದ್ದಾನೆ.
ಇದನ್ನೂ ಓದಿ: ರಾಯರ ದರ್ಶನಕ್ಕೆ ತೆರಳಿದ್ದ ಮೈಸೂರಿನ ರಾಘವೇಂದ್ರ ಅನುಮಾನಾಸ್ಪದ ರೀತಿ ಸಾವು