ಮಂಗಳೂರು : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೊಡ್ಡ ನಿಧಿಯ ಸಂಗ್ರಹವಾಗಬೇಕಾಗಿದೆ. ಹಾಗಾಗಿ, ಎಲ್ಲರೂ ಕನಿಷ್ಠ ಹತ್ತು ರೂ., ಗರಿಷ್ಠ ಅಂದರೆ ತಮ್ಮ-ತಮ್ಮ ಶಕ್ತಿ ಸಾಮರ್ಥ್ಯಕ್ಕನುಗುಣವಾಗಿ ನೀಡಬಹುದು. ಮನೆಗೆ ನೂರು ರೂ. ನಂತೆ ದೇಣಿಗೆ ನೀಡಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕರೆ ನೀಡಿದರು.
ನಗರದ ಕದ್ರಿಯಲ್ಲಿರುವ ವಿಶ್ವ ಹಿಂದೂ ಪರಿಷತ್ನ ವಿಶ್ವಶ್ರೀ ಸಭಾಂಗಣದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಬಡವ-ಶ್ರೀಮಂತ ಎಲ್ಲರ ಹಣದಿಂದ ಈ ಮಂದಿರ ನಿರ್ಮಾಣವಾಗಬೇಕು ಎನ್ನುವ ಉದ್ದೇಶದಿಂದ ಮಂದಿರವನ್ನು ದೇಣಿಗೆ ಹಣದಿಂದ ನಿರ್ಮಾಣ ಮಾಡಲಾಗುತ್ತಿದೆ. ಹಾಗಾಗಿ, ನಮ್ಮ ಶಕ್ತಿಗನುಸಾರವಾಗಿ ದೇಣಿಗೆ ನೀಡಿ ಮಂದಿರ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸೋಣ ಎಂದು ಹೇಳಿದರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುವ ಮೂಲಕ ಶತ ಶತಮಾನಗಳ ಕನಸು ನನಸಾಗುವ ಕಾಲ ಕೂಡಿ ಬಂದಿದೆ. ಈ ಕಾರ್ಯದಲ್ಲಿ ನಾವು-ನೀವು ಎಲ್ಲರೂ ತಮ್ಮ ತಮ್ಮ ಶಕ್ತಿ ಸಾಮರ್ಥ್ಯಕ್ಕನುಗುಣವಾಗಿ ಕೈಜೋಡಿಸೋಣ. ಶ್ರೀರಾಮ ಮಂದಿರ ನಮ್ಮ ಸ್ವಾಭಿಮಾನದ ಪ್ರತೀಕ, ನಮ್ಮ ಗೌರವದ ಸಂಕೇತ ಎಂದು ಹೇಳಿದರು.
ಶ್ರೀ ರಾಮಚಂದ್ರ ತಾನಾಗಿಯೇ ಯಾರ ಮೇಲೆಯೂ ದಾಳಿ ನಡೆಸಿಲ್ಲ. ಆದರೆ, ಅವರಾಗಿಯೇ ದಾಳಿ ನಡೆಸಿ, ನಮ್ಮತನವನ್ನು ಕಸಿದುಕೊಂಡರೋ ಆಗ ಆತ ಸುಮ್ಮನಾಗಿಲ್ಲ. ಇದು ನಮಗೆ ಆದರ್ಶ. ನಮ್ಮ ಭೂಮಿಯ ಮೇಲೆ ದಾಳಿ ಮಾಡಿ ಯಾರು ಕಸಿದುಕೊಂಡರೋ ಅದು ಈಗ ಇತಿಹಾಸವಾಗಿದೆ.
ಈ ಸುದ್ದಿಯನ್ನೂ ಓದಿ: ಗೋಹತ್ಯೆ ನಿಷೇಧ ಕಾನೂನು ಕೂಡಲೇ ಜಾರಿಯಾಗಲಿ: ಪೇಜಾವರ ಶ್ರೀ
ಇಂದು ಅದನ್ನು ನಾವು ಮತ್ತೆ ಪುನರ್ ಸ್ಥಾಪಿಸುವ ಮಹತ್ವದ ಅವಕಾಶ ನಮಗೆ ಲಭ್ಯವಾಗಿದೆ. ಅದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳೋಣ ಎಂದು ಪೇಜಾವರ ಶ್ರೀಗಳು ಹೇಳಿದರು. ಈ ಸಂದರ್ಭದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಡಾ. ವೈ ಭರತ್ ಶೆಟ್ಟಿ, ಕಲ್ಲಡ್ಕ ಪ್ರಭಾಕರ ಭಟ್, ಶರಣ್ ಪಂಪ್ ವೆಲ್ ಹಾಗೂ ಮತ್ತಿತರೆ ಹಿಂದೂ ಮುಖಂಡರು ಉಪಸ್ಥಿತರಿದ್ದರು.