ಪುತ್ತೂರು: ಕೋವಿಡ್-19 ಬಗ್ಗೆ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ದೂರದ ಬೆಂಗಳೂರಿನ ಗಿವ್‌ಬ್ಯಾಕ್ ಸಾಮಾಜಿಕ ಸಂಸ್ಥೆ ಈಗ ಋಣ ಸಂದಾಯದ ಸಮಯ-ಕೈಚೆಲ್ಲುವ ಸಮಯವಲ್ಲ ಎಂಬ ಸ್ಲೋಗನ್‌ನೊಂದಿಗೆ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ತನ್ನ ಕೋವಿಡ್ ಅಭಿಯಾನಕ್ಕೆ ಪುತ್ತೂರಿನಲ್ಲಿ ಭಾನುವಾರ ಚಾಲನೆ ನೀಡಿತು.
ನಗರಸಭೆ ಕಚೇರಿ ಎದುರಿನಲ್ಲಿ ಭಾನುವಾರ ಬೆಳಗ್ಗೆ ನಿಜವಾದ ಕೊರೊನಾ ವಾರಿಯರ್ಸ್ಗಳಾದ ನಗರಸಭೆಯ ಪೌರಕಾರ್ಮಿಕರು ಹಾಗೂ ಆಶಾ ಕಾರ್ಯಕರ್ತರನ್ನು ಸೇರಿಸಿಕೊಂಡು ಅವರಿಗೆ ಸ್ಯಾನಿಟೈಸರ್, ಮಾಸ್ಕ್, ಕೈಗವಸುಗಳನ್ನು ವಿತರಿಸುವ ಮೂಲಕ ಗೌರವಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಪುತ್ತೂರಿಗೆ ಆಗಮಿಸಿದ ಗಿವ್‌ಬ್ಯಾಕ್ ಸಂಸ್ಥೆಯ ಇಡೀ ಟೀಮ್ ಪುತ್ತೂರಿನ ಸದಸ್ಯರೊಂದಿಗೆ ಪುತ್ತೂರು ಯುವಜನ ಒಕ್ಕೂಟದ ಸಹಕಾರದೊಂದಿಗೆ ತನ್ನ ಅಭಿಯಾನಕ್ಕೆ ಚಾಲನೆ ನೀಡಿತು.
ಬಹುತೇಕ ಇಂಡಸ್ಟ್ರಿಯಲ್ ಕೆಲಸಗಾರರು, ಸಾಫ್ಟ್ವೇರ್ ಇಂಜಿನಿಯರ್ಗಳು, ಉದ್ಯಮಿಗಳು ತಂಡದಲ್ಲಿದ್ದು, ಈಗಾಗಲೇ ಬೆಂಗಳೂರಿನಲ್ಲಿ ಎಲ್ಲಾ ವಾರ್ಡ್ಗಳಲ್ಲಿ ತನ್ನ ಅಭಿಯಾನವನ್ನು ಹಮ್ಮಿಕೊಂಡಿದೆ. ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆ, ತಾಲೂಕುಗಳಲ್ಲಿ ತನ್ನ ಅಭಿಯಾನವನ್ನು ನಡೆಸುವ ಇರಾದೆ ವ್ಯಕ್ತಪಡಿಸಿದೆ.
ಪುತ್ತೂರು ಶಾಸಕ ಸಂಜೀವ ಮಠಂದೂರು ಮಾಸ್ಕ್ಗಳನ್ನು ವಿತರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ, 65 ಸಾವಿರ ಜನಸಂಖ್ಯೆಯಿರುವ ಪುತ್ತೂರು ನಗರಸಭೆಯಲ್ಲಿ ಪ್ರತಿಯೊಬ್ಬರು ಆರೋಗ್ಯದಿಂದಿರಬೇಕು ಎಂಬ ನಿಟ್ಟಿನಲ್ಲಿ ಪೌರಕಾರ್ಮಿಕರು ತಮ್ಮ ವೃತ್ತಿಯಲ್ಲಿ ತೊಡಗಿಕೊಂಡಿರುತ್ತಾರೆ. ಈ ನಿಟ್ಟಿನಲ್ಲಿ ಹಳ್ಳಿ ಜನರ ಬದುಕಿನ, ಆರೋಗ್ಯದ ಕುರಿತು ಕಾಳಜಿಯನ್ನಿಟ್ಟು ಗಿವ್‌ಬ್ಯಾಕ್ ಸಾಮಾಜಿಕ ಸಂಸ್ಥೆ ಆಶಾ ಕಾರ್ಯಕರ್ತರು, ಪೌರಕಾರ್ಮಿಕರಿಗೆ ತನ್ನಿಂದಾದ ಸೇವೆಯನ್ನು ಒದಗಿಸಿ ಪುತ್ತೂರಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿದೆ ಎಂದರು.
ನಂತರ ಗಿವ್‌ಬ್ಯಾಕ್ ಟೀಮ್‌ನ ಮುಖ್ಯಸ್ಥ ಶಿವಪ್ರಸಾದ್ ಮಂಜುನಾಥ ಮಾತನಾಡಿ, ಇದೊಂದು ರಾಜ್ಯ ಮಟ್ಟದ ಅಭಿಯಾನವಾಗಿದ್ದು, ಆರಂಭದ ದಿನದಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್ ಅಭಿಯಾನಕ್ಕೆ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದರು. ಮುಖ್ಯವಾಗಿ ಕೊರೊನಾ ವಿರುದ್ಧ ಒಬ್ಬೊಬ್ಬರೇ ಫೈಟ್ ಮಾಡಬೇಕಾಗುತ್ತದೆ. ಇದಕ್ಕೆ ಶಿಸ್ತು ಅತೀ ಅಗತ್ಯ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ನಾವು ಮಾಡುತ್ತಿದ್ದೇವೆ. ಮುಂದಿನ ದಸರಾ ಸಂದರ್ಭ ಬೇರೆ ಬೇರೆ ಕಡೆಗಳಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಅಶೋಕ್ ಶೆಣೈ ಭಾಮಿ, ಪರಿಸರ ಅಭಿಯಂತರ ಗುರುಪ್ರಸಾದ್, ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ, ಗಿವ್‌ಬ್ಯಾಕ್ ಟೀಮ್‌ನ ಮುಖ್ಯಸ್ಥ ಶಿವಪ್ರಸಾದ್ ಮಂಜುನಾಥ, ಗೌತಮ್‌ರಾಜ್ ಮತ್ತಿತರರು ಹಾಜರಿದ್ದರು.