ಕಡಬ: ತಾಲೂಕಿನ ವಿವಿಧೆಡೆ ಲಾಕ್ಡೌನ್ ಇದ್ದರೂ ಲೆಕ್ಕಿಸದೆ ಮಾಂಸ, ಮೀನು ಖರೀದಿಯಲ್ಲಿ ನಿರತರಾಗಿದ್ದ ಜನರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಇಂದು ಕರಾವಳಿಯಲ್ಲಿ ಆಟಿ ಅಮವಾಸ್ಯೆ ದಿನವಾದ್ದರಿಂದ ತಾಲೂಕಿನ ಪ್ರಮುಖ ಪ್ರದೇಶಗಳಾದ ಕಡಬ, ಕಳಾರ, ಅಲಂಕಾರು ಕೋಡಿಂಬಾಳದಲ್ಲಿ ಮಾಂಸ ಮತ್ತು ಚಿಕನ್ ಸೆಂಟರ್ಗಳ ಮುಂದೆ ಜನಜಂಗುಳಿ ಇತ್ತು. ಲಾಕ್ಡೌನ್ ಇರುವ ಹಿನ್ನೆಲೆ ಅಗತ್ಯ ಸಾಮಗ್ರಿಗಳ ಮಾರಾಟ ಮತ್ತು ಖರೀದಿಗೆ 11 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಆದರೆ ಕೆಲ ವ್ಯಾಪಾರಿಗಳು ನಿಗದಿತ ಅವಧಿ ಕಳೆದರೂ ಅಂಗಡಿ ಬಂದ್ ಮಾಡಿರಲಿಲ್ಲ. ಅಲ್ಲದೆ ಖರೀದಿಗೆ ಬಂದ ಜನ ಕೂಡ, ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅಂಗಡಿಗಳ ಮುಂದೆ ಸೇರಿದ್ದರು. ಪೊಲೀಸರು ಅಂಗಡಿ ಬಂದ್ ಮಾಡುವಂತೆ ವಿನಂತಿಸಿದರೂ ಜನ ಕ್ಯಾರೆ ಅಂದಿಲ್ಲ. ಕೊನೆಗೆ ಲಾಠಿ ಬೀಸಿದ ಪೊಲೀಸರು, ಜನರನ್ನು ಚದುರಿಸಿದ್ದಾರೆ.
ಕಡಬ ಠಾಣಾಧಿಕಾರಿ ರುಕ್ಮ ನಾಯ್ಕ್ ನೇತೃತ್ವದಲ್ಲಿ ಗಸ್ತು ನಡೆಯುತ್ತಿದ್ದು, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ಸೇರಿದಂತೆ ಅಧಿಕಾರಿಗಳು ಅವಧಿ ಮೀರಿದರೂ ತೆರೆದಿರುವ ಅಂಗಡಿಗಳನ್ನು ಮುಚ್ಚಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.