ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಳ್ಪ ಗ್ರಾಮವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಆದರ್ಶ ಗ್ರಾಮಯೋಜಯಡಿ ದತ್ತು ಪಡೆದಿದ್ದಾರೆ. ಆದ್ರೆ, ಇಂದಿಗೂ ಇಲ್ಲಿನ ಜನರಿಗೆ ಮೂಲ ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಕಾಡು ದಾರಿಯಾದ ಈ ಗ್ರಾಮಕ್ಕೆ ಸರಿಯಾದ ರಸ್ತೆ, ವಿದ್ಯುತ್ನಂತಹ ಕನಿಷ್ಠ ಸೌಲಭ್ಯಗಳು ಗಗನಕುಸುಮವಾಗಿವೆ ಎಂಬ ಆರೋಪಗಳು ಕೇಳಿಬಂದಿವೆ.

ಇಲ್ಲಿನ ಪಡಿಕ್ಕಲಾಯ ಗ್ರಾಮದ ನಿವಾಸಿ ರಾಮಣ್ಣ ಪೂಜಾರಿಯವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮನೆವರೆಗೆ ರಸ್ತೆ ಸಂಪರ್ಕ ಇಲ್ಲದ ಕಾರಣ ಕುಟುಂಬಸ್ಥರು, ಸ್ಥಳೀಯರು ಕಾಡು ದಾರಿಯಲ್ಲಿ ಹೊತ್ತುಕೊಂಡೇ ಸಾಗಿದ್ದಾರೆ. ನಂತರ ಆ್ಯಂಬುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಗ್ರಾಮದಲ್ಲಿ ಸುಮಾರು 30 ಕುಟುಂಬಗಳು ವಾಸವಾಗಿದ್ದು, ಮುಖ್ಯ ಪೇಟೆಯಿಂದ 3 ಕಿ.ಮೀ ದೂರದಲ್ಲಿದೆ. ಗರ್ಭಿಣಿಯರು, ರೋಗಿಗಳು ಮುಂತಾದವರು ಸೂಕ್ತ ರಸ್ತೆ ಸಂಪರ್ಕವಿಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ.
ಇನ್ನಾದರೂ ಸಂಸದ ನಳಿನ್ ಕುಮಾರ್ ಅವರು ಗ್ರಾಮದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಮುಂದಾಗಲಿ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.