ಮಂಗಳೂರು: ಸರ್ಪ ಸಂಸ್ಕಾರಕ್ಕೆ ಪ್ರಸಿದ್ಧಿ ಪಡೆದ ಧಾರ್ಮಿಕ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ. ಸರ್ಪದೋಷ ಶಾಂತಿ, ಆಶ್ಲೇಷ ಪೂಜೆ, ಚರ್ಮ ವ್ಯಾಧಿ, ಸಂತಾನ ಭಾಗ್ಯ ಮುಂತಾದ ಪೂಜೆ ಮಾಡಿಸಲು ಇಲ್ಲಿಗೆ ಕರ್ನಾಟಕ ಮಾತ್ರವಲ್ಲ, ಇಡೀ ಭಾರತದಾದ್ಯಂತ ಭಕ್ತರು ಆಗಮಿಸುತ್ತಾರೆ. ದಿನವೂ ಇಲ್ಲಿಗೆ ಸುಮಾರು 20 ಸಾವಿರ ಭಕ್ತರು ಆಗಮಿಸುತ್ತಿದ್ದು, ವಿಶೇಷ ದಿನಗಳಲ್ಲಿ 50 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುತ್ತಾರೆ.
ಮಾರ್ಚ್, ಏಪ್ರಿಲ್, ಮೇ ತಿಂಗಳು ಇಡೀ ಭಾರತದಾದ್ಯಂತ ಅತೀ ಹೆಚ್ಚು ಭಕ್ತರು ಆಗಮಿಸುತ್ತಿದ್ದು, ಇದೀಗ ಲಾಕ್ಡೌನ್ ಪರಿಣಾಮ ಭಕ್ತರ ಸುಳಿವಿಲ್ಲದೆ ದೇವಸ್ಥಾನ ಬಿಕೋ ಎನ್ನುತ್ತಿದೆ. ಇದರಿಂದಾಗಿ ದೇವಾಲಯದ ಆದಾಯವೂ ಶೂನ್ಯವಾಗಿದೆ.
ದೇವಾಲಯದ ವಾರ್ಷಿಕ ಆದಾಯ 98ರಿಂದ 100 ಕೋಟಿ ರೂ. ಇದ್ದು, ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಅತಿ ಹೆಚ್ಚು ಭಕ್ತರ ಆಗಮನದಿಂದ ಆದಾಯವೂ ಚೆನ್ನಾಗಿರುತ್ತಿತ್ತು. ಆದರೆ ಈ ಬಾರಿ ಕೊರೊನಾ ಸೋಂಕು ಭೀತಿಯ ಹಿನ್ನೆಲೆಯಲ್ಲಿ ಎಲ್ಲಾ ದೇವಾಲಯಗಳಿಗೂ ಭಕ್ತರ ಆಗಮನವನ್ನು ನಿರ್ಬಂಧಿಸಲಾಗಿದೆ.
ಮಾರ್ಚ್ ಮಧ್ಯಭಾಗದಿಂದ ಈವರೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಯಾವುದೇ ಭಕ್ತರು ಆಗಮಿಸದೇ, ಆದಾಯದಲ್ಲಿಯೂ ಶೂನ್ಯ ಸಂಪಾದನೆಯಾಗಿದೆ. ಕಳೆದ ಮಾರ್ಚ್ನಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆದಾಯ 7,60,18,137.93 ರೂ. ಆಗಿದ್ದು, ಏಪ್ರಿಲ್ನಲ್ಲಿ 6,57,33,223.26 ರೂಪಾಯಿ ಆಗಿತ್ತು. ಮೇ ತಿಂಗಳಲ್ಲಿ 8,61,86,203 ರೂಪಾಯಿ ಗಳಿಕೆಯಾಗಿತ್ತು. ಆದರೆ ಇದೀಗ ಲಾಕ್ಡೌನ್ ಪರಿಣಾಮ ದೇವಾಲಯಕ್ಕೆ ಯಾವುದೇ ಆದಾಯ ಬಂದಿಲ್ಲ.