ಮಂಗಳೂರು: ಕಡಲನಗರಿ ಮಂಗಳೂರಿನಲ್ಲಿ ದೇಗುಲ ದರ್ಶನಕ್ಕೆ ಬರುವವರು ಅತ್ಯಧಿಕ ಸಂಖ್ಯೆಯಲ್ಲಿರುತ್ತಾರೆ. ನವರಾತ್ರಿ ಸಂದರ್ಭದಲ್ಲಿ ದೇವಿ ದೇವಸ್ಥಾನಕ್ಕೆ ದರ್ಶನಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಈ ಭಕ್ತರ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿ ಮಂಗಳೂರಿನಲ್ಲಿ ವಿಶೇಷ ಪ್ಯಾಕೆಜ್ ದಸರ ದರ್ಶಿನಿ ಆರಂಭಿಸಿದೆ.
ನವರಾತ್ರಿ ಸಂದರ್ಭದಲ್ಲಿ ಒಂದೆರಡು ದೇವಸ್ಥಾನದ ದರ್ಶನ ಮಾಡಿ ಬರುವಲ್ಲಿ ಸಾಕಾಗಿ ಹೋಗುತ್ತದೆ. ಇಂತಹದರಲ್ಲಿ ಕೆಎಸ್ಆರ್ಟಿಸಿ ಒಂದೇ ದಿನದಲ್ಲಿ ಒಂಬತ್ತು ದೇವಸ್ಥಾನ ದರ್ಶನ ಮಾಡುವ ವ್ಯವಸ್ಥೆ ಮಾಡಿದೆ.
ಬೆಳಗ್ಗೆ 8ಗಂಟೆಗೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಹೊರಡುವ ದಸರ ದರ್ಶಿನಿ ಬಸ್ ಮೊದಲಿಗೆ ಮಂಗಳಾ ದೇವಿ ದೇವಸ್ಥಾನ ತೆರಳುತ್ತದೆ. ಬಳಿಕ ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ, ಕಟೀಲು ದೇವಸ್ಥಾನ ತೆರಳಿ ಅಲ್ಲಿ ಊಟ ಮುಗಿಸಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದರ್ಶನ ಮಾಡಿ ಬಳಿಕ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ ದರ್ಶನ ಮಾಡಿ ಬೀಚ್ಗೆ ತೆರಳಿ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಉರ್ವ ಮಾರಿಯಮ್ಮ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥ ದೇವಸ್ಥಾನ ದರ್ಶನ ಮುಗಿಸಿ ರಾತ್ರಿ 8.30ಕ್ಕೆ ಮಂಗಳೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣ ತಲುಪುತ್ತದೆ.
ಈ ವಿಶೇಷ ಪ್ಯಾಕೆಜ್ಗೆ ವಯಸ್ಕ ಪ್ರಯಾಣಿಕರಿಗೆ ರೂ 300, 6 ವರ್ಷ ಮೇಲ್ಪಟ್ಟ ಮಕ್ಕಳಿಗೆ ರೂ 250 ನಿಗದಿಪಡಿಸಲಾಗಿದೆ. ನವರಾತ್ರಿಗೆ ಆರಂಭಿಸಿದ ದಸರಾ ದರ್ಶನ ಪ್ಯಾಕೆಜ್ಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಪ್ರತಿ ದಿನ ಪ್ರಯಾಣಿಕರ ಲಭ್ಯತೆಯ ಆಧಾರದಲ್ಲಿ 7 ರಿಂದ 9 ಬಸ್ಗಳು ಕೆಎಸ್ಆರ್ಟಿಸಿಯಿಂದ ಹೊರಡುತ್ತಿದೆ.
ಕೆಎಸ್ಆರ್ಟಿಸಿಯಿಂದ ಆರಂಭಿಸಲಾದ ಈ ದಸರಾ ದರ್ಶಿನಿ ಪ್ಯಾಕೆಜ್ ಭಕ್ತರಲ್ಲಿ ಖುಷಿ ತಂದಿದೆ. ಇಷ್ಟೆಲ್ಲಾ ದೇವಿ ದೇವಸ್ಥಾನವನ್ನು ಒಂದೇ ದಿನದಲ್ಲಿ ಕಡಿಮೆ ದರದಲ್ಲಿ ದರ್ಶನ ಮಾಡಿ ಬರಲು ಮಾಡಿರುವ ವ್ಯವಸ್ಥೆಗೆ ಸಂತಸಗೊಂಡಿದ್ದಾರೆ. ಒಟ್ಟಿನಲ್ಲಿ ನವರಾತ್ರಿಗೆ ಮಂಗಳೂರಿನಲ್ಲಿ ಕೆಎಸ್ಆರ್ಟಿಸಿ ಮಾಡಿದ ವ್ಯವಸ್ಥೆ ಭಕ್ತರಲ್ಲಿ ಖುಷಿ ಮೂಡಿಸಿದೆ.
ಇದನ್ನೂ ಓದಿ: ಮಂಗಳೂರು ದಸರಾಕ್ಕೆ ಅದ್ಧೂರಿ ಚಾಲನೆ : ನವದುರ್ಗೆಯರೊಂದಿಗೆ ಶಾರದಾ ಮಾತೆಯ ಪ್ರತಿಷ್ಠಾಪನೆ