ಬೆಳ್ತಂಗಡಿ : ಮಗಳನ್ನು ಮದುವೆ ಮಾಡಿ ಕೊಡಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಕೊಲೆ ಮಾಡಲು ಯತ್ನಿಸಿದ ಘಟನೆ ತಾಲೂಕಿನ ಲಾಯಿಲ ಗ್ರಾಮದ ವಿವೇಕಾನಂದ ನಗರದಲ್ಲಿ ನಡೆದಿದೆ. ಈ ವೇಳೆ ಗಲಾಟೆ ತಡೆಯಲು ಹೋದ ಗ್ರಾಮ ಪಂಚಾಯತ್ ಸದಸ್ಯರೊಬ್ಬರಿಗೂ ಗಾಯವಾಗಿದೆ.
ಏನಿದು ಘಟನೆ?
ಕಡಬ ತಾಲೂಕು ಸುಬ್ರಹ್ಮಣ್ಯ ಸಮೀಪದ ನಿವಾಸಿ ದಿನೇಶ್ ಎಂಬಾತ ಕೊಲೆಗೆ ಯತ್ನಿಸಿದ ಆರೋಪಿ. ಈತ ಲಾಯಿಲದ ವಿವೇಕಾನಂದ ನಗರದ ವ್ಯಕ್ತಿಯೋರ್ವರ ಮಗಳನ್ನು ಮದುವೆ ಮಾಡಿ ಕೊಡುವಂತೆ ಕೇಳುತ್ತಿದ್ದನಂತೆ. ಆದರೆ, ಇದಕ್ಕೆ ಅವರು ನಿರಾಕರಿಸಿದ್ದರು.
ಇದೇ ಕೋಪದಲ್ಲಿ ಜುಲೈ 11ರಂದು ಬೆಳಗ್ಗೆ 10:30ರ ಸುಮಾರಿಗೆ ಆ ವ್ಯಕ್ತಿಯ ಮನೆ ಬಳಿಗೆ ಬೈಕ್ನಲ್ಲಿ ಆಗಮಿಸಿದ ದಿನೇಶ್, ಅವಾಚ್ಯ ಶಬ್ಧಗಳಿಂದ ನಿಂದಿಸಿ, ನಿಮ್ಮ ಮಗಳನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೆ ಮೊದಲೇ ಬ್ಯಾಗ್ನಲ್ಲಿ ತಂದಿದ್ದ ಕತ್ತಿಯಿಂದ ತಲೆ ಕಡಿಯಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಓದಿ : ಪ್ರೇಮ ವೈಫಲ್ಯದ ಶಂಕೆ: ಪ್ರಿಯತಮೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ನಾ ಕೀಚಕ?
ಕತ್ತಿಯಿಂದ ಕಡಿಯಲು ಮುಂದಾದಾಗ ವ್ಯಕ್ತಿ ತನ್ನ ಕೈಯನ್ನು ಅಡ್ಡ ಹಿಡಿದಿದ್ದು, ಕೈಗೆ ಗಂಭೀರ ಗಾಯವಾಗಿದೆ. ಈ ವೇಳೆ ಹಲ್ಲೆಗೊಳಗಾದ ವ್ಯಕ್ತಿಯನ್ನು ರಕ್ಷಿಸಲು ಸ್ಥಳೀಯ ನಿವಾಸಿ, ಗ್ರಾಪಂ ಸದಸ್ಯ ಮಹೇಶ್ ಎಂಬುವರು ಆಗಮಿಸಿದ್ದರು.
ಈ ವೇಳೆ ಅವರ ಮೇಲೂ ಆರೋಪಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಇತರ ಸ್ಥಳೀಯರು ಧಾವಿಸಿ ಬಂದು ಆರೋಪಿಯನ್ನು ತಡೆಯುಲು ಯತ್ನಿಸಿದ್ದರು. ಆಗ ಆರೋಪಿ ಅವರಿಗೂ ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಬೆಳ್ತಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗ್ತಿದೆ.