ಮಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ದೊಡ್ಡ ಹೆಸರಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಅತ್ಯಾಧುನಿಕ ಆಸ್ಪತ್ರೆಗಳು ಹಲವು ಸಾಧನೆಗಳನ್ನು ಮಾಡಿವೆ. ಇದೇ ಮೊದಲ ಬಾರಿಗೆ ವಿದೇಶಿಗರೊಬ್ಬರಿಗೆ ಕಿಡ್ನಿ ಕಸಿ ಮಾಡುವ ಮೂಲಕ ಮಂಗಳೂರಿನ ಇಂಡಿಯಾನ ಆಸ್ಪತ್ರೆ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೀನ್ಯಾ ದೇಶದ ಕೃಷಿ ವಿಜ್ಞಾನಿ ಫ್ರಾನ್ಸಿಸ್ ಜಾನ್ ಮುಸ್ಸೆಂಬಿ ಅವರು ದೀರ್ಘ ಕಾಲದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು. ಕೀನ್ಯಾದಲ್ಲಿ ವಾರದಲ್ಲಿ 2 ಬಾರಿ ಹಿಮೋ ಡಯಾಲಿಸಿಸ್ಗೆ ಒಳಗಾಗುತ್ತಿದ್ದರು. ಕೀನ್ಯಾದಲ್ಲಿ ಡಯಾಲಿಸಿಸ್ ತ್ರಾಸದಾಯಕ ಮತ್ತು ದುಬಾರಿ ಚಿಕಿತ್ಸೆ ಆಗಿದ್ದು, ಫ್ರಾನ್ಸಿಸ್ ಅವರು ವಾರದಲ್ಲಿ 2 ಬಾರಿ 70 ಕಿಲೋ ಮೀಟರ್ ದೂರದಲ್ಲಿರುವ ಡಯಾಲಿಸಿಸ್ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಆರೋಗ್ಯ ಪರಿಸ್ಥಿತಿಯನ್ನು ಗಮನಿಸಿದ ಅವರ ಸಹೋದರ ಪ್ಯಾಟ್ರಿಕ್ ಎಂಬುವರು ಕಿಡ್ನಿ ದಾನ ಮಾಡಲು ಒಪ್ಪಿಗೆ ನೀಡಿದರು. ಆದರು ಕೂಡ ಕೀನ್ಯಾದಲ್ಲಿ ಇರುವ ಅನೇಕ ಆಸ್ಪತ್ರೆಗಳಲ್ಲಿ ಉತ್ತಮ ಸೌಲಭ್ಯ ಇಲ್ಲದೆ ಇರುವ ಕಾರಣ ಮತ್ತು ದುಬಾರಿ ವೆಚ್ಚವಿರುವುದರಿಂದ ಅಲ್ಲಿ ಶಸ್ತ್ರ ಚಿಕಿತ್ಸೆ ಮಾಡಲು ಆಗಿರಲಿಲ್ಲ.
ಕೀನ್ಯಾ ದೇಶದೊಂದಿಗೆ ಮಂಗಳೂರಿನ ಇಂಡಿಯಾನ ಆಸ್ಪತ್ರೆ ರೋಗಿಗಳಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಂಡಿರುವುದನ್ನು ಗಮನಿಸಿದ ಅವರು, ಮಂಗಳೂರಿಗೆ ಬಂದು ಕಿಡ್ನಿ ಕಸಿ ಮಾಡಿಸಿಕೊಂಡರು. ಅವರ ಸಹೋದರ ದಾನ ಮಾಡಿದ ಕಿಡ್ನಿಯನ್ನು ಇಂಡಿಯಾನ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಜೋಡಣೆ ಮಾಡಿದರು. ಮಾರ್ಚ್ 28ರಂದು ಫ್ರಾನ್ಸಿಸ್ ಅವರಿಗೆ ಕಿಡ್ನಿ ಕಸಿ ಮಾಡಲಾಯ್ತು. ಅವರ ಆರೋಗ್ಯ ಸುಧಾರಿಸಿ ನಾಳೆ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ.
ಇಂಡಿಯಾನ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಯೂಸುಫ್ ಕುಂಬ್ಳೆ, ಡಾ. ಪ್ರದೀಪ್ ನೇತೃತ್ವದಲ್ಲಿ ವೈದ್ಯರ ತಂಡ ಮಂಗಳೂರಿನಲ್ಲಿ ಮೊದಲ ಬಾರಿಗೆ ವಿದೇಶಿ ರೋಗಿಗೆ ಕಿಡ್ನಿ ಕಸಿಯನ್ನು ಮಾಡುವ ಮೂಲಕ ಶ್ಲಾಘನೆಗೆ ಪಾತ್ರವಾಗಿದ್ದಾರೆ.