ಮಂಗಳೂರು: ರೆಡ್ ಬಾಕ್ಸೈಟ್ ಕಂಪನಿಯೊಂದಿಗೆ ಸೇರಿ ಅಕ್ರಮ ಗಣಿಗಾರಿಕೆಯಲ್ಲಿ ಮಂಗಳೂರು ಶಾಸಕ ಯು.ಟಿ. ಖಾದರ್ ಅವರ ಹತ್ತಿರದ ಸಂಬಂಧಿಗಳು ತೊಡಗಿಸಿಕೊಂಡಿದ್ದಾರೆ. ಅದು ಬಿಟ್ಟು ಮಾಜಿ ಸಚಿವ ರಮಾನಾಥ ರೈಯವರು ಆರೋಪಿಸಿದಂತೆ ಶಾಸಕ ರಾಜೇಶ್ ನಾಯ್ಕ್ ರವರ ಯಾವುದೇ ಸಂಬಂಧಿಗಳು ಇದರಲ್ಲಿ ಶಾಮೀಲಾಗಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಸ್ಪಷ್ಟನೆ ನೀಡಿದರು.
ನಗರದ ಕೊಡಿಯಾಲಬೈಲ್ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಡಿಪುವಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಶಾಸಕರ ಹತ್ತಿರದ ಸಂಬಂಧಿಗಳು ಶಾಮೀಲಾಗಿದ್ದಾರೆ ಎಂದು ಮಾಜಿ ಉಸ್ತುವಾರಿ ಸಚಿವ ರಮಾನಾಥ ರೈಯವರು ಆರೋಪಿಸಿದ್ದಾರೆ. ಇದಕ್ಕೆ ಅವರು ದಾಖಲೆ ನೀಡಲಿ. ನಮಗೆ ಬಂದ ಮಾಹಿತಿ ಪ್ರಕಾರ ಅಕ್ರಮ ಮಣ್ಣು ಸಾಗಾಟ ಪ್ರಕ್ರಿಯೆಯಲ್ಲಿ ಖಾದರ್ ಸಂಬಂಧಿಗಳು ಶಾಮೀಲಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆಯವರು ಹೇಳಿದರು.
ರಾಜೇಶ್ ನಾಯ್ಕ್ ರವರ ಪರವಾನಿಗೆ ಬಳಸಿ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈಗ ಪರವಾನಿಗೆ ದೊರಕುವುದು ಆನ್ಲೈನ್ ಮೂಲಕ. ಆದ್ದರಿಂದ ಅವರು ದಾಖಲೆ ತೆಗೆದು ಪರಿಶೀಲನೆ ನಡೆಸಲಿ. ಅಲ್ಲದೆ ಪರಿಸರ ಮಾಲಿನ್ಯದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ರಮಾನಾಥ ರೈಯವರು ಪರಿಸರ ಮಂತ್ರಿಯಾಗಿರುವಾಗಲೇ ರಾಜೇಶ್ ನಾಯ್ಕ್ ರವರಿಗೆ ಗಣಿಗಾರಿಕೆ ನಡೆಸಲು ಪರವಾನಿಗೆ ದೊರಕಿದ್ದು, ಅನುಮತಿ ಕೊಡುವಾಗ ಯಾಕೆ ಅವರಿಗೆ ಪರಿಸರದ ಬಗ್ಗೆ ಗೊತ್ತಾಗಲಿಲ್ಲ. ರಾಜಕೀಯವಾಗಿ ನೇರವಾಗಿ ಕೆಲಸ ಮಾಡಲಿ. ಅದು ಬಿಟ್ಟು ಈ ರೀತಿಯಲ್ಲಿ ಹಿಂದಿನಿಂದ ಚಾರಿತ್ರ್ಯಹರಣ ಮಾಡುವಂತಹ ಕೆಲಸ ಮಾಡೋದು ಬೇಡ ಎಂದರು.
ಈ ಬಗ್ಗೆ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಮುಡಿಪು ಭಾಗಗಳಲ್ಲಿ ಕೆಂಪು ಕಲ್ಲಿನ ಕ್ವಾರೆಗಳಲ್ಲಿ ಅಕ್ರಮಗಳು ನಡೆಯುತ್ತಿದೆ. ಇದರಲ್ಲಿ ನನ್ನ ಸಂಬಂಧಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಹೇಳಿದ್ದರು. ನನಗೆ ಅಲ್ಲಿ ಯಾರೂ ಸಂಬಂಧಿಗಳು ಇಲ್ಲ. ಆದರೆ ನಾನು ಬಹಳಷ್ಟು ವರ್ಷಗಳಿಂದ ನನ್ನ ತೋಟದ ಒಳಗೆ ಯಾವುದೇ ಅಕ್ರಮವಿಲ್ಲದೆ ಪರವಾನಿಗೆ ಸಹಿತ ಕೆಂಪು ಕಲ್ಲಿನ ಗಣಿಗಾರಿಕೆ ನಡೆಸುತ್ತಿದ್ದೇನೆ. ಆದರೆ ಕಳೆದ ಎಂಟು ತಿಂಗಳಿನಿಂದ ಇದರ ಪರವಾನಿಗೆಯನ್ನು ನವೀಕರಣ ಮಾಡಿಲ್ಲ ಎಂದರು.
ಇನ್ನು ಕೋವಿಡ್ ಬಳಿಕ ಸರ್ಕಾರ ತೆರಿಗೆಯನ್ನು ಏಕಾಏಕಿ 92 ರೂ.ನಿಂದ 262 ರೂ.ಗೇರಿಸಿತು. ಇದು ಲಾಭದಾಯಕವಾಗಿರದ ಹಿನ್ನೆಲೆಯಲ್ಲಿ ನಾನು ಗಣಿಗಾರಿಕೆ ನಡೆಸುತ್ತಿಲ್ಲ. ಆ ಬಳಿಕ ನಾನು ಸರ್ಕಾರಕ್ಕೆ ಮನದಟ್ಟು ಮಾಡಿರುವುದರಿಂದ ತೆರಿಗೆಯನ್ನು ಕಡಿಮೆ ಮಾಡಲಾಗಿದೆ. ಆದ್ದರಿಂದ ಅಕ್ರಮ ಗಣಿಗಾರಿಕೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಿ ಎಂದು ಹೇಳಿದರು.