ಮಂಗಳೂರು: ಇಂದು ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಿದ್ದು, ಪರೀಕ್ಷೆ ಬರೆಯಲು ಕೇರಳದ ವಿದ್ಯಾರ್ಥಿಗಳು ಗಡಿ ಮೂಲಕ ಜಿಲ್ಲೆಗೆ ಬಂದಿದ್ದಾರೆ.
ಜಿಲ್ಲೆಯಲ್ಲಿ 30,835 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಇದರಲ್ಲಿ ಕೇರಳದ 367 ವಿದ್ಯಾರ್ಥಿಗಳು ಇದ್ದಾರೆ. ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿರುವ ಕೇರಳ ವಿದ್ಯಾರ್ಥಿಗಳು ಕೇರಳ - ಕರ್ನಾಟಕ ಗಡಿ ಬಂದ್ ಆಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅವರಿಗೆ ಕರ್ನಾಟಕಕ್ಕೆ ಬರಲು ವ್ಯವಸ್ಥೆ ಮಾಡಿದೆ.
ಕೇರಳ ಗಡಿ ಪ್ರದೇಶದಲ್ಲಿರುವ ದ.ಕ ಜಿಲ್ಲೆಯ ಭಾಗಗಳಿಂದ ವಿದ್ಯಾರ್ಥಿಗಳನ್ನು ಕರೆತರಲು 29 ಚೆಕ್ ಪೋಸ್ಟ್ ನಿರ್ಮಿಸಿ ಅಲ್ಲಿ ನೋಡಲ್ ಅಧಿಕಾರಿ ನೇಮಿಸಿ, ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ತರಲು ವ್ಯವಸ್ಥೆ ಮಾಡಿದೆ.
ಕರ್ನಾಟಕ ಕೇರಳ ಗಡಿಭಾಗವಾದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತಲಪಾಡಿಯಲ್ಲೂ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲು ಸಕಲ ವ್ಯವಸ್ಥೆ ಮಾಡಲಾಗಿತ್ತು. ಕೇರಳದಿಂದ ತಲಪಾಡಿ ಗಡಿಗೆ ಬಂದ ವಿದ್ಯಾರ್ಥಿಗಳನ್ನು ಸಾಮಾಜಿಕ ಅಂತರದಲ್ಲಿ ನಿಲ್ಲಿಸಿ ಅವರ ಥರ್ಮಲ್ ಪರೀಕ್ಷೆ ನಡೆಸಿ, ಸ್ಯಾನಿಟೈಸರ್ ಹಾಕಿ ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯವಸ್ಥೆ ಮಾಡಿದ ವಾಹನದಲ್ಲಿ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ.