ಮಂಗಳೂರು : ತುಳು ಸಿನಿಮಾಗಳನ್ನು ನೀಡುವ ಕೋಸ್ಟಲ್ವುಡ್ನಲ್ಲಿ ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೇ ಇದೆ. ಬಾಹುಬಲಿ ಸಿನಿಮಾದ ಯಶಸ್ಸಿನ ಬಳಿಕ ಫೇಮಸ್ ಆದ ಕಟ್ಟಪ್ಪ ಪಾತ್ರದ ಯಶಸ್ಸಿನಿಂದ ಪ್ರೇರಣೆಗೊಂಡು 'ಕಟಪಾಡಿ ಕಟ್ಟಪ್ಪ' ಎಂಬ ಹೆಸರಿನಲ್ಲಿ ನಿರ್ಮಾಣವಾದ ತುಳು ಸಿನಿಮಾ ತನ್ನ ವಿಭಿನ್ನ ಪ್ರಯತ್ನದ ಮೂಲಕ ತುಳು ಚಿತ್ರರಂಗ ಮಾರುಕಟ್ಟೆಗೆ ಹೊಸ ಬಲ ಮೂಡಿಸಲು ಪ್ರಯತ್ನವನ್ನು ಮಾಡಿದೆ.
ತುಳು ಸಿನಿಮಾಗಳೆಂದರೆ ಅವುಗಳಿಗೆ ಮಾರುಕಟ್ಟೆ ಇರುವುದು ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡಿನ ಜಿಲ್ಲೆಗಳಲ್ಲಿ ಮಾತ್ರ. ಇಲ್ಲಿನ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ತುಳು ಸಿನಿಮಾ ನಿರ್ಮಾಣವಾಗುತ್ತವೆ. ಇದರಿಂದ ನಿರ್ಮಾಪಕರು ಹೆಚ್ಚಿನ ಹೂಡಿಕೆ ಮಾಡಲು ಮುಂದಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಟಪಾಡಿ ಕಟ್ಟಪ್ಪ ತುಳು ಸಿನಿಮಾದ ಮೂಲಕ ಹೊಸ ಪ್ರಯತ್ನ ಆರಂಭವಾಗಿದೆ.
ಕಟಪಾಡಿ ಕಟ್ಟಪ್ಪ ಸಿನಿಮಾ ಮಾರ್ಚ್ 29 ರಂದು ಬಿಡುಗಡೆಯಾಗಲಿದ್ದು 200 ಕ್ಕೂ ಅಧಿಕ ಥಿಯೇಟರ್ನಲ್ಲಿ ಪ್ರದರ್ಶನ ಆಗುತ್ತದೆ ಎಂಬುದೇ ವಿಶೇಷ. ಮಾರ್ಚ್ 29 ರಂದು ಸುಮಾರು 9 ಕನ್ನಡ ಸಿನಿಮಾಗಳು ಬಿಡುಗಡೆಯಾಗಲಿದ್ದು, ಇದರ ನಡುವೆ ತುಳು ಸಿನಿಮಾಗೂ ಕೂಡ ಥಿಯೇಟರ್ ಹೊಂದಾಣಿಕೆಯಾಗಿದೆ.
ಸಾಧಾರಣವಾಗಿ ಚಿತ್ರ ಬಿಡುಗಡೆ ಬಳಿಕ ಜಾಹೀರಾತು ನೀಡಿ ಪ್ರೇಕ್ಷಕರನ್ನು ಆಕರ್ಷಿಸುವುದು ಸಾಮಾನ್ಯ. ಆದರೆ, ಕರಾವಳಿಯ ಭಾಗವನ್ನು ಹೊರತುಪಡಿಸಿ ರಾಜ್ಯದ ಇತರೆಡೆಗೆ ಅಲ್ಲಿನ ತುಳು ಭಾಷಿಕರನ್ನು ಒಟ್ಟು ಮಾಡಿ, ಅದರ ಆಧಾರದಲ್ಲಿ ಚಿತ್ರ ಮಂದಿರವನ್ನು ಬುಕ್ ಮಾಡಲಾಗಿದೆ. ಥಿಯೇಟರ್ ಮತ್ತು ಪ್ರೇಕ್ಷಕರ ಅನುಕೂಲಕ್ಕೆ ತಕ್ಕಂತೆ ಥಿಯೇಟರ್ನಲ್ಲಿ ಸಮಯ ಮತ್ತು ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ತುಳು ಸಿನಿಮಾಕ್ಕೆ ರಾಜ್ಯ, ಹೊರರಾಜ್ಯದ ಮಾರುಕಟ್ಟೆಯನ್ನು ಬಳಸುವ ಪ್ರಯತ್ನ ಮಾಡಲಾಗಿದೆ.
ತುಳು ರಂಗಭೂಮಿಯ ಹಿರಿಯ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್, ನಿರ್ಮಾಪಕ ರಾಜೇಶ್ ಬ್ರಹ್ಮಾವರ ಅವರ ಪ್ರಯತ್ನಗಳಿಂದ ಈ ತುಳು ಸಿನಿಮಾ ಹೊಸ ಪ್ರಯತ್ನಗಳಿಗೆ ಮುಂದಾಗಿದೆ.ವಿದೇಶದಲ್ಲೂ ಮಾರ್ಚ್ 29 ರಂದು ಚಿತ್ರ ಬಿಡುಗಡೆ ಆಗುತ್ತಿರುವುದು ವಿಶೇಷ. ಅಲ್ಲಿನ ತುಳು ಭಾಷಿಕರನ್ನು ಒಟ್ಟು ಗೂಡಿಸಿ ಕೆಲವೆಡೆ ಥಿಯೇಟರ್ ಬದಲಿಗೆ ಸಭಾಂಗಣದಲ್ಲಿ ತಂತ್ರಜ್ಞಾನ ಬಳಸಿ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ.
ಶ್ರೀಲಂಕಾ, ಸಿಂಗಾಪುರದಲ್ಲಿ ಈಗಾಗಲೇ ಪ್ರದೇಶ ನಿರ್ಧರಿಸಲಾಗಿದೆ. ದುಬೈ, ಅಮೆರಿಕಾದಲ್ಲೂ ಚಿತ್ರ ಪ್ರದರ್ಶಿಸುವ ಬಗ್ಗೆ ಸಂಬಂಧಿಸಿದವರ ಜತೆಗೆ ಮಾತುಕತೆ ನಡೆಸಲಾಗುತ್ತಿದೆ ಅಂತಾ ಚಿತ್ರತಂಡ ಹೇಳಿಕೊಂಡಿದೆ.ಕರಾವಳಿಯ ಸೀಮಿತ ಮಾರುಕಟ್ಟೆ ಹೊಂದಿದ್ದ ತುಳು ಚಿತ್ರರಂಗ ದೇಶ, ಈಗ ವಿದೇಶದ ಸಿನಿಮಾ ಮಾರುಕಟ್ಟೆಯಲ್ಲಿ ಪ್ರದರ್ಶನಗೊಳ್ಳಲು ಸಜ್ಜಾಗುವ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾಗಿದೆ.