ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2019ನೇ ಸಾಲಿನ ಗೌರವ ಪ್ರಶಸ್ತಿಗೆ ಈ ಬಾರಿ ಮೂವರು ಆಯ್ಕೆಯಾಗಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಮಾತನಾಡಿದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜಗದೀಶ್ ಪೈ, ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗೋಕುಲ್ ದಾಸ್ ಪ್ರಭು, ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅರ್ಗೋಡ್ ಮೋಹನ ದಾಸ್ ಶೆಣೈ ಹಾಗೂ ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಷ್ಣು ಶಾಬು ರಾಣೆಯವರಿಗೆ ಈ ಬಾರಿಯ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಗೌರವ ಪುರಸ್ಕಾರ ನೀಡಲಾಗುವುದು ಎಂದು ಹೇಳಿದರು.
ಅಲ್ಲದೇ 2019ನೇ ಸಾಲಿನ ಪುಸ್ತಕ ಪುರಸ್ಕಾರಕ್ಕೆ ಮೂರು ಸಾಧಕರನ್ನು ಆಯ್ಕೆ ಮಾಡಲಾಗಿದೆ. ಕವನಕ್ಕೆ ವೆಂಕಟೇಶ್ ನಾಯಕ್, ಸಣ್ಣಕಥೆಗೆ ಕ್ಲೆರೆನ್ಸ್ ಡೊನಾಲ್ಡ್ ಪಿಂಟೊ, ಅಧ್ಯಯನಕ್ಕೆ ದೊ.ಪಿಯುಸ್ ಪಿದಲಿಸ್ ಪಿಂಟೊ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭ ಕೊಂಕಣಿ ಸಾಹಿತ್ಯ ಸಮ್ಮೇಳನ ಹಾಗೂ ಬೆಳ್ಳಿ ಹಬ್ಬ ಸಮಾರಂಭದ ಗೌರವಾಧ್ಯಕ್ಷೆ ಸಂಧ್ಯಾ ಪೈ ಮಾತನಾಡಿ, ಅಕಾಡೆಮಿಯ 25ನೇ ವರ್ಷದ ಬೆಳ್ಳಿ ಹಬ್ಬ ಸಮಾರಂಭವು ಫೆ.22-23ರಂದು ಕಾರ್ಕಳದ ಶ್ರೀ ವೆಂಕಟರಮಣ ದೇವಸ್ಥಾನ ಶಿಕ್ಷಣ ಸಮೂಹ ಸಭಾಂಗಣದಲ್ಲಿ ನಡೆಯಲಿದೆ. ಫೆ.23ರಂದು ಸಿಎಂ ಯಡಿಯೂರಪ್ಪ ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಹೇಳಿದರು.
ಬೆಳ್ಳಿ ಹಬ್ಬ ಸಮಾರಂಭವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ.ರವಿ ಉದ್ಘಾಟಿಸಲಿದ್ದಾರೆ. ಗೃಹಮಂತ್ರಿ ಬಸವರಾಜ ಬೊಮ್ಮಾಯಿ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಖ್ಯಾತ ಸಾಹಿತಿ ನಾ.ಡಿಸೋಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 25 ಜನ ಕೊಂಕಣಿ ಸಾಧಕರಿಗೆ ಸನ್ಮಾನ ನಡೆಯಲಿದೆ ಎಂದು ಹೇಳಿದರು.