ಮಂಗಳೂರು: ಜೋಗಿ ಸಮಾಜದ ಪರಮೋಚ್ಛ ಗುರು, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಅವಹೇಳನ ಹಾಗೂ ವೈಯುಕ್ತಿಕ ನಿಂದನೆ ಮಾಡಿರುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಹೇಳಿಕೆಯನ್ನು ಜೋಗಿ ಸಮುದಾಯದವರು, ಮಾಜಿ ಮೇಯರ್ ಆಗಿರುವ ಹರಿನಾಥ್ ಅವರು ಸಮರ್ಥಿಸಿರುವುದು ಖೇದಕರ ಎಂದು ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘ ತಿಳಿಸಿದೆ.
ಆದಿತ್ಯನಾಥ್ ಅವರ ವೈಯುಕ್ತಿಕ ನಿಂದನೆಯನ್ನು ಖಂಡಿಸಿ ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘ ಹೇಳಿರುವ ಹೇಳಿಕೆ ರಾಜಕೀಯ ಪ್ರೇರಿತ ಎಂದು ಅವರು ಹೇಳಿರುವುದಲ್ಲದೆ, ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಪ್ರಸ್ತುತ ಅಧ್ಯಕ್ಷರಾಗಿರುವ ಕಿರಣ್ ಕುಮಾರ್ ಜೋಗಿ ಸ್ವಯಂಘೋಷಿತ ಅಧ್ಯಕ್ಷರಾಗಿದ್ದು, ಚುನಾಯಿತರಾಗಿಲ್ಲ ಎಂದಿದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾಗಿರುವ ಮಾತಾಗಿದ್ದು, ಹರಿನಾಥ್ ಅವರು ಸಂಘದ ಅಧ್ಯಕ್ಷರನ್ನು ಹೀಯಾಳಿಸಲು ಈ ಹೇಳಿಕೆ ನೀಡಿದ್ದಾರೆ. ಈ ಮೂಲಕ ಅವರು ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗಿದೆ.
ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಪ್ರಸ್ತುತ ಅಧ್ಯಕ್ಷರಾಗಿರುವ ಕಿರಣ್ ಕುಮಾರ್ ಜೋಗಿಯವರು ಮೂರನೆಯ ಅವಧಿಗೆ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದವರಾಗಿದ್ದಾರೆ. ಆದ್ದರಿಂದ ಹರಿನಾಥ್ ಅವರು ತಮ್ಮ ಹೇಳಿಕೆಯನ್ನು ತಕ್ಷಣ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಅವರ ಮೇಲೆ ನ್ಯಾಯಾಲಯದಲ್ಲಿ ಮಾನಹಾನಿ ಮೊಕದ್ದಮೆ ಹೂಡಲಾಗುವುದು ಎಂದು ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಪ್ರಕಟಣೆ ತಿಳಿಸಿದೆ.