ಮಂಗಳೂರು: ಪಂಚರಾಜ್ಯದ ಚುನಾವಣೆಗೆ ಕರ್ನಾಟಕವನ್ನು ಎಟಿಎಂ ಆಗಿ ಬಳಕೆ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಆರೋಪಿಸಿದರು. ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ದ ನಗರದ ಕಾವೂರು ಜಂಕ್ಷನ್‍ನಲ್ಲಿ ಮಂಗಳವಾರ ಬಿಜೆಪಿ ಮಂಗಳೂರು ಉತ್ತರ ಮಂಡಲದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗುತ್ತಿಗೆದಾರರಿಗೆ 600 ಕೋಟಿ ರೂ ಬಿಡುಗಡೆ ಮಾಡಿದ್ದು, ಅದರ ಕಮಿಷನ್ ಹಣ ಐಟಿ ದಾಳಿಯಲ್ಲಿ ಸಿಕ್ಕಿದೆ. ಇದಕ್ಕೆ ಪುರಾವೆಯೂ ಇದ್ದು ಕಾಂಗ್ರೆಸ್ ನಾಯಕರಿಗೆ ಮತ್ತೆ ತಿಹಾರ್ ಜೈಲ್ ಕೋಣೆ ಸಿದ್ದವಾಗುತ್ತಿದೆ ಎಂದು ಟೀಕಿಸಿದರು.
80 ಪರ್ಸೆಂಟ್ ಕಾಂಗ್ರೆಸ್ ಸರಕಾರ: ಈ ಹಿಂದೆ ನಮ್ಮ ಸರಕಾರಕ್ಕೆ ಪೇ ಸಿಎಂ, 40 ಪರ್ಸೆಂಟ್ ಸರಕಾರ ಎಂದು ಸುಳ್ಳಾರೋಪ ಮಾಡಿದ್ದರು. ಸಾಕ್ಷ್ಯ ನೀಡಿರಲಿಲ್ಲ. ನಾಲ್ಕು ತಿಂಗಳಲ್ಲಿ ಸಾಕ್ಷ್ಯ ಇಲ್ಲದೇ ಯಾವುದೇ ಮಂತ್ರಿಯನ್ನು ಜೈಲಿಗೆ ಕಳುಹಿಸಲು ವಿಫಲರಾದರು. ಇದೀಗ ಕಾಂಗ್ರೆಸ್ ಸರಕಾರವೇ 80 ಪರ್ಸೆಂಟ್ ಸರಕಾರವಾಗಿದೆ. ಹಣ ಪಡೆದ ಬಗ್ಗೆ ಚೀಟಿ ಐಟಿ ಅಧಿಕಾರಿಗಳಿಗೆ ದೊರೆತಿದೆ. ಪಂಚರಾಜ್ಯ ಚುನಾವಣೆಗೆ ಕಳುಹಿಸಲು ಇಟ್ಟ ಹಣವಾಗಿದೆ ಎಂಬುದು ಸ್ಪಷ್ಟ. ಕರ್ನಾಟಕ ಕಾಂಗ್ರೆಸ್ ಹೈಕಮಾಂಡ್‍ಗೆ ಎಟಿಎಂ ಆಗಿದೆ ಎಂದು ಆರೋಪಿಸಿದರು.
ಅಧಿಕಾರಿಗಳ ವರ್ಗಾವಣೆಗೆ ಹಣ ನಿಗದಿ: ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆಗೆ ಹಣ ನಿಗದಿಪಡಿಸಲಾಗಿದೆ. ವರ್ಗಾವಣೆ ದಂಧೆಯಾಗಿ ಬೆಳೆದು ನಿಂತು ತಾಲೂಕು ಕಚೇರಿಯಿಂದ ಎಲ್ಲೆಡೆ ಲಂಚ ಕೇಳುವ ಪರಿಸ್ಥಿತಿ ಉಂಟಾಗಿದೆ ಎಂದು ದೂರಿದರು.
ಮೈಸೂರು ದಸರದಲ್ಲಿ ಕಲಾವಿದನಿಂದ ಕಮಿಷನ್ ಪಡೆಯಲು ಮುಂದಾದ ಇಂತಹ ಕೆಟ್ಟ ಸರಕಾರ ಬೇರೆ ಇರಲಿಕ್ಕಿಲ್ಲ. ಇಂದು ಅಭಿವೃದ್ಧಿಗೆ ಹಣವೇ ಇಲ್ಲವಾಗಿದೆ. ಹದಿನೈದು ದಿನದಲ್ಲಿ ರಾಜ್ಯದಲ್ಲಿ ವಿದ್ಯುತ್ ಇಲ್ಲದೆ ಕತ್ತಲೆ ರಾಜ್ಯವಾಗುತ್ತಿದೆ. 32 ರೈತರು ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಭಿವೃದ್ಧಿಗೆ ಹಣವಿಲ್ಲ. ಇದ್ದ ಖಜಾನೆಯೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮನೆಯಲ್ಲಿ ಇರುವ ಹಾಗಿದೆ. ಬಿಜೆಪಿ ಕಾಂಗ್ರೆಸ್ ಸರಕಾರದ ಲಂಚಾವತಾರದ ವಿರುದ್ದ ರಾಜ್ಯ ವ್ಯಾಪಿ ಹೋರಾಟ ನಡೆಸಲು ನಿರಂತರವಾಗಿ ನಡೆಯಲಿದೆ ಎಂದು ಆರೋಪಿಸಿದರು.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ ಮಾತನಾಡಿ, ಮಂಗಳೂರಿಗೆ ಲಂಚ ಕೊಟ್ಟು ಸ್ಥಾನಕ್ಕೆ ಬಂದ ಅಧಿಕಾರಿಯೊಬ್ಬರು ಕೋಟಿ ಕೊಟ್ಟು ಬಂದು ಜನರಿಂದ ಸುಲಿಗೆ ಮಾಡುವ ಮಾಹಿತಿ ಬರುತ್ತಿದೆ. ಖಜಾನೆಯಲ್ಲಿ ಹಣವಿಲ್ಲದ ಕಾರಣ ನಮಗೆ ಅನುದಾನ ಸಿಗುತ್ತಿಲ್ಲ. ಈ ಸರಕಾರದ ಅಭಿವೃದ್ಧಿ ಶೂನ್ಯವಾಗಲಿದೆ ಎಂದು ದೂರಿದರು.
ಆರು ತಿಂಗಳಲ್ಲಿ ಶಾಸಕರಿಗೆ ಹಣ ಬಿಡುಗಡೆ ಮಾಡುವ ಯೋಗ್ಯತೆ ಇಲ್ಲ. ಕನಿಷ್ಠ 50 ಸಾವಿರ ರೂ ಬಿಡುಗಡೆ ಮಾಡಲು ಹಣವಿಲ್ಲ. ನಮ್ಮ ಸರಕಾರದಲ್ಲಿ ಈ ಕ್ಷೇತ್ರ ಒಂದಕ್ಕೆ 2 ಸಾವಿರ ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಜಗದೀಶ್ ಶೇಣವ, ತಿಲಕ್ ರಾಜ್ ಕೃಷ್ಣಾಪುರ, ಕಸ್ತೂರಿ ಪಂಜ, ಪೂಜಾ ಪೈ, ರಣ್‍ದೀಪ್ ಕಾಂಚನ್, ಉಪ ಮೇಯರ್ ಸುನಿತಾ ಭಾರತೀಯ ಜನತಾ ಪಕ್ಷ ಮಂಗಳೂರು ಉತ್ತರ ಮಂಡಲದ ಪದಾಧಿಕಾರಿಗಳು ಭಾಗವಹಿಸಿದ್ದರು.
ಇದನ್ನೂಓದಿ: ಹೆಚ್ಡಿಕೆ, ನಿಖಿಲ್ ಉಚ್ಛಾಟನೆ ನಕಲಿ ಪತ್ರ ವೈರಲ್; ಇಬ್ರಾಹಿಂ ಬಂಡಾಯದ ಹಿಂದೆ ಕಾಂಗ್ರೆಸ್ ಕೈವಾಡ ಎಂದ ಜಿಟಿಡಿ