ಉಳ್ಳಾಲ (ದಕ್ಷಿಣ ಕನ್ನಡ): ಕಾಂತಾರ ದೇಶಾದ್ಯಂತ ಸೂಪರ್ ಹಿಟ್ ಆದ ಕನ್ನಡ ಚಿತ್ರರಂಗದ ಸಿನಿಮಾ. ಈ ಚಿತ್ರದಿಂದ ನಟಿ ಸಪ್ತಮಿ ಗೌಡ ಅವರ ಜನಪ್ರಿಯತೆ ಹೆಚ್ಚಿದೆ. ಕಾಂತಾರ ಸಪ್ತಮಿ ಅವರ ಎರಡನೇ ಸಿನಿಮಾ. ಮುಂದಿನ ಸಿನಿಮಾ ಕೆಲಸಗಳು ಆರಂಭ ಆಗುವುದಕ್ಕೂ ಮುನ್ನ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಅದರ ಭಾಗವಾಗಿ, ಕಟೀಲು ಕ್ಷೇತ್ರ, ಕಲ್ಲಾಪು ಬುರ್ದುಗೋಳಿ ಕೊರಗಜ್ಜನ ಉದ್ಭವಶಿಲೆಯ ಆದಿತಳಕ್ಕೆ ಹಾಗೂ ಕುತ್ತಾರು ಕೊರಗಜ್ಜನ ಆದಿತಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇಂದು ಕಟೀಲು ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ ಅವರು ಪೂಜೆ ಸಲ್ಲಿಸಿದ್ದಾರೆ. ಅವರಿಗೆ ಕುಟುಂಬದವರು ಸಾಥ್ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ಕಾಂತಾರ ಚಿತ್ರದ ಬಳಿಕ ದೈವದ ಮೇಲಿನ ನಂಬಿಕೆ ಹೆಚ್ಚಾಗಿದೆ. ಕೊರಗಜ್ಜನ ಬಗ್ಗೆ ಕೇಳಿ ತಿಳಿದಿದ್ದೆ, ಇದೀಗ ದೈವ ಸಾನಿಧ್ಯವನ್ನು ನೋಡುವ ತವಕದಿಂದ ಬಂದಿದ್ದೇನೆ. ಕೊರಗಜ್ಜನ ದಯೆಯಿಂದ ಇನ್ನಷ್ಟು ಚಿತ್ರಗಳು ಸಿಗಲಿ ಎಂದು ಪ್ರಾರ್ಥಿಸಿದ್ದೇನೆ. ಕಾಂತಾರ 50 ದಿನ ಪೂರೈಸಿರುವುದು ದೈವದ ಕೃಪೆಯಿಂದ ಎಂದು ನಟಿ ಸಪ್ತಮಿ ಗೌಡ ತಿಳಿಸಿದರು.

ಇದನ್ನೂ ಓದಿ: 'ಸ್ವಾತಿ ಮುತ್ತಿನ ಮಳೆ ಹನಿಯೇ' ಶೂಟಿಂಗ್ ಕಂಪ್ಲೀಟ್
ಈ ಸಂದರ್ಭ ಕಾಂತಾರ ಚಿತ್ರ ನಟ ಸನಿಲ್ ಗುರು, ಕದ್ರಿ ಕ್ರಿಕೆಟರ್ಸ್ ಅಧ್ಯಕ್ಷ ಜಗದೀಶ್ ಕದ್ರಿ, ನಟಿಯ ತಾಯಿ ಶಾಂತಾ, ಕಲ್ಲಾಪು ಬುರ್ದುಗೋಳಿ ಕೊರಗಜ್ಜ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ವಿಶ್ವನಾಥ್ ನಾಯಕ್, ಕುತ್ತಾರು ಕೊರಗಜ್ಜನ ಆದಿತಳದ ದೇವಿಪ್ರಸಾದ್ ಶೆಟ್ಟಿ, ಸಾಯಿ ಪರಿವಾರ್ ಟ್ರಸ್ಟಿಗಳಾದ ಪುರುಷೋತ್ತಮ್ ಕಲ್ಲಾಪು, ಪ್ರವೀಣ್ ಎಸ್ ಕುಂಪಲ, ಕಿಶೋರ್ ಡಿ.ಕೆ, ಪುರುಷೋತ್ತಮ್ ಶೆಟ್ಟಿ, ಪ್ರಶಾಂತ್ ಕಾಯಂಗಳ ಮುಂತಾದವರು ಉಪಸ್ಥಿತರಿದ್ದರು.