ಬಂಟ್ವಾಳ: ತಾಲೂಕಿನ ಹೊಕ್ಕಾಡಿಗೋಳಿಯ ಶ್ರೀ ಮಹಿಷಮರ್ಧಿನಿ ಕಂಬಳ ಸಮಿತಿಯಿಂದ ನಡೆದ ಮೊದಲ ಕಂಬಳ ವೀರ ವಿಕ್ರಮ ಅದ್ಧೂರಿಯಾಗಿ ನಡೆದಿದ್ದು, ಸುಮಾರು 167 ಜೋಡಿ ಕೋಣಗಳ ಆಕರ್ಷಕ ಓಟ ಗಮನ ಸೆಳೆಯಿತು.
ಈ ಸಂದರ್ಭ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಕಂಬಳ ಕ್ರೀಡೆಗೆ ಹೆಚ್ಚಿನ ಪ್ರಚಾರ ನೀಡಿ ಅದನ್ನು ಅಂತಾರಾಷ್ಟ್ರೀಯ ಕ್ರೀಡೆಯಾಗಿ ರೂಪಿಸಲು ಸರ್ಕಾರ ಬೆಂಬಲ ನೀಡಲಿದೆ. ಕಂಬಳ ಒಂದು ಅದ್ಭುತ ಕ್ರೀಡೆ. ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗೆ ಸಮಾನರಾದ ಕ್ರೀಡಾಪಟುಗಳು ಕಂಬಳ ಕ್ಷೇತ್ರದಲ್ಲಿದ್ದಾರೆ. ವಾಯು ವೇಗದ ಕೋಣಗಳ ಜೊತೆ ಅವುಗಳಷ್ಟೇ ವೇಗದಲ್ಲಿ ಓಡುವುದು ಸುಲಭವಲ್ಲ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸಾಂಪ್ರದಾಯಿಕ ಕ್ರೀಡೆಯಾದ ಕಂಬಳಕ್ಕೆ ಸಮಯದ ಮಿತಿ ನಿಗದಿ ಪಡಿಸುವುದು ಸರಿಯಲ್ಲ. ಕೊರೊನಾ 10 ಗಂಟೆಯವರೆಗೆ ಬರುತ್ತದೆ. ಬಳಿಕ ಬರುವುದಿಲ್ಲ ಎನ್ನುವ ಮೂಢನಂಬಿಕೆ ಬೇಡ. ಬೆಳಗ್ಗೆವರೆಗೆ ಕಂಬಳ ನಡೆಯಲಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಹೇಳಿದರು. ಅಲ್ಲದೆ, ಕಂಬಳಕ್ಕೆ ಸರ್ಕಾರದಿಂದ ಸಹಾಯಧನ ಕೊಡಿಸುವುದಾಗಿ ಭರವಸೆ ನೀಡಿದರು. ಇದೇ ವೇಳೆ ವೈಯಕ್ತಿಕವಾಗಿ 11 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದರು.
ಓದಿ: ಐದೂವರೆ ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿ ಮಹಿಳೆ.. ಆಸ್ಪತ್ರೆಯಿಂದ 6 ಕೋಟಿ ರೂಪಾಯಿ ಬಿಲ್ ಆರೋಪ
ಇದೇ ವೇಳೆ ಕಂಬಳ ಕ್ಷೇತ್ರದಲ್ಲಿ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತರಾದ ಶ್ರೀನಿವಾಸ ಗೌಡ, ಸುರೇಶ್ ಎಂ. ಶೆಟ್ಟಿ, ಪ್ರವೀಣ್ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕರಾದ ರಾಜೇಶ್ ನಾಯ್ಕ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮೊದಲಾದವರು ಉಪಸ್ಥಿತರಿದ್ದರು.