ಮಂಗಳೂರು : ಜಗತ್ತಿನೆಲ್ಲೆಡೆ ಭೀತಿ ಹುಟ್ಟಿಸಿರುವ ಮಹಾಮಾರಿ ಕೊರೊನಾ ರೋಗ ಶೀಘ್ರ ನಿವಾರಣೆಯಾಗಲಿ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ್ ಕಾಮತ್ ಅವರು ದೇವರ ಮೊರೆ ಹೋಗಿದ್ದಾರೆ.
ಇಂದು ಬೆಳಗ್ಗೆ ನಗರದ ಕದ್ರಿ ಶ್ರೀ ಮಂಜುನಾಥ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಿ ಕೊರೊನಾ ರೋಗ ಶೀಘ್ರ ಶಮನವಾಗಲಿ ಎಂದು ಕಾಮತ್ ಅವರು ಪ್ರಾರ್ಥಿಸಿದರು. ಬಳಿಕ ಮಾತನಾಡಿದ ಅವರು, ಜಗತ್ತನ್ನು ಕಾಡುತ್ತಿರುವ ಕೊರೊನಾ ಮಹಾಮಾರಿಯು ಭಾರತದ ವಿವಿಧ ಪ್ರದೇಶಗಳಲ್ಲಿ ಕಾಣಿಸಿದ್ರಿಂದ ಆತಂಕ ಸೃಷ್ಟಿಯಾಗಿದೆ. ಇತ್ತೀಚೆಗೆ ಕಲಬುರ್ಗಿಯಲ್ಲಿ ಕೊರೊನಾ ಸೋಂಕಿನಿಂದ ಓರ್ವ ಮೃತಪಟ್ಟಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಯಾರಿಗಾದರೂ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಶಾಸಕರು ಈ ಸಂದರ್ಭದಲ್ಲಿ ಮನವಿ ಮಾಡಿದರು.
ಕೊರೊನಾ ಭೀತಿ, ರೋಗ ದೂರಾಗಲೆಂಬ ನಿಟ್ಟಿನಲ್ಲಿ ಮಂಗಳೂರಿನ ಎಲ್ಲಾ ದೇವಸ್ಥಾನ,ಮಠ-ಮಂದಿರ, ಚರ್ಚ್, ಮಸೀದಿಗಳಲ್ಲೂ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಆಡಳಿತ ಮಂಡಳಿ ಹಾಗೂ ನಾಗರಿಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದ ಅವರು, ಇಂದು ರಥಬೀದಿ ವೆಂಕಟರಮಣ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ ಎಂದರು.