ಕಡಬ(ದ.ಕನ್ನಡ): ಯುವತಿಯೋರ್ವಳಿಗೆ ಪೊಲೀಸ್ ಸಿಬ್ಬಂದಿಯೊಬ್ಬ ಲೈಂಗಿಕ ದೌರ್ಜನ್ಯವೆಸಗಿ, ನಂತರದಲ್ಲಿ ತನ್ನ ಪ್ರಾಬಲ್ಯದಿಂದ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದ್ದಾನೆ ಎಂಬ ಗಂಭೀರ ಪ್ರಕರಣವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಡಿವೈಎಸ್ಪಿ ಡಾ.ಗಾನಾ ಪಿ.ಕುಮಾರ್ ಕಡಬ ಪೊಲೀಸ್ ಠಾಣೆಗೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ. ಠಾಣೆಯ ಸಿಬ್ಬಂದಿ ಈ ಕೃತ್ಯ ಮಾಡಿದ್ದಾನೆ ಎನ್ನಲಾಗಿದ್ದು, ಈ ಪ್ರಕರಣವನ್ನು ಮುಚ್ಚಿ ಹಾಕಲು ಆತ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾನೆ ಎಂಬ ಆರೋಪವೂ ಇದೆ.
ಇದಕ್ಕೆ ಪೂರಕವೆಂಬಂತೆ ಈ ಬಗ್ಗೆ ಮಾಹಿತಿ ಪಡೆಯಲು ಬಂದ ಪತ್ರಕರ್ತನಿಗೆ, ಈ ಪೊಲೀಸ್ ಸಿಬ್ಬಂದಿ ಈ ಬಗ್ಗೆ ವರದಿ ಮಾಡದಂತೆಯೂ ದುಂಬಾಲು ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಚಾರವೂ ಪುತ್ತೂರು ಡಿವೈಎಸ್ಪಿ ಡಾ. ಗಾನಾ ಪಿ.ಕುಮಾರ್ ಅವರ ಗಮನಕ್ಕೂ ಬಂದಿದ್ದು, ಠಾಣೆಗೆ ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಪುತ್ತೂರು ಡಿವೈಎಸ್ಪಿ, ಪೊಲೀಸ್ ಸಿಬ್ಬಂದಿಯೋರ್ವ ಯುವತಿಗೆ ಲೈಂಗಿಕ ದೌರ್ಜನ್ಯ ಎಸಗಿ, ಆಕೆಯನ್ನು ಗರ್ಭವತಿಯನ್ನಾಗಿಸಿ, ಬಳಿಕ ಗರ್ಭಪಾತ ಮಾಡಿಸಿದ್ದಾನೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ವಿಷಯಕ್ಕೆ ಸಂಬಂಧಿಸಿ ಸಂತ್ರಸ್ತೆ ಅಥವಾ ಸಾರ್ವಜನಿಕರು ಹೆಸರು ಉಲ್ಲೇಖ ಮಾಡಿ ದೂರು ನೀಡಿದರೆ ತನಿಖೆ ನಡೆಸಿ ಆರೋಪಿ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು