ಮಂಗಳೂರು : ಜಿಲ್ಲೆಯಲ್ಲಿ ಖಾಸಗಿ ಬಸ್ಗಳು ಜೂ.1ರಿಂದ ಓಡಾಟ ನಡೆಸಲಾರಂಭಿಸಲಿದ್ದು, ಮೊದಲಿಗೆ ಯಾವುದೇ ರೂಟ್ನಲ್ಲಿ 5 ಬಸ್ಗಳಿಗೆ ಪರವಾನಗಿ ಇದ್ದರೂ ಕೇವಲ ಮೂರು ಬಸ್ಗಳನ್ನು ರಸ್ತೆಗಿಳಿಸಲು ಮಾಲೀಕರು ನಿರ್ಧರಿಸಿದ್ದಾರೆ.
ಹಲವು ದಿನಗಳ ನಂತರ ಬಸ್ ಸಂಚಾರ ಆರಂಭವಾಗುವುದರಿಂದ, ಎಷ್ಟು ಪ್ರಯಾಣಿಕರು ಬಸ್ ನಲ್ಲಿ ಪ್ರಯಾಣಿಸಬಹುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಧಾನ, ಸ್ಯಾನಿಟೈಸರ್ ಬಳಕೆ, ಬಸ್ ದರ ಏರಿಕೆ ಬಗ್ಗೆ ಜಿಲ್ಲಾಡಳಿತ ಯಾವುದೇ ನಿರ್ಧಾರ ಇನ್ನೂ ಪ್ರಕಟಿಸಿಲ್ಲ. ಈ ಮಾರ್ಗಸೂಚಿ ಬಿಡುಗಡೆ ಮಾಡಿದ ಬಳಿಕ ಬಸ್ ಸಂಚಾರವನ್ನು ವ್ಯವಸ್ಥಿತವಾಗಿ ನಡೆಸಲು ಸಾಧ್ಯ. ಈ ಬಗ್ಗೆ ಇನ್ನೂ ಮಾಹಿತಿ ದೊರಕದ ಕಾರಣ ಬಸ್ ಮಾಲೀಕರಿಗೆ ಬೇಕಾದ ತಯಾರಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಬಸ್ ಮಾಲೀಕರು ತಿಳಿಸಿದರು.
ಈ ಕುರಿತು ಮಾತನಾಡಿದ ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್ ರಾಜ್, ರಾಜ್ಯದಲ್ಲಿ ನಾಲ್ಕನೇ ಹಂತದ ಲಾಕ್ಡೌನ್ನಲ್ಲಿ ಖಾಸಗಿ ಬಸ್ ಗಳ ಸಂಚಾರಕ್ಕೆ ಸರ್ಕರ ಅನುಮತಿ ನೀಡಿತ್ತು. ಆದರೆ ದ.ಕ.ಜಿಲ್ಲೆಯಲ್ಲಿ ಖಾಸಗಿ ಬಸ್ಗಳನ್ನು ಸಾರಿಗೆ ಇಲಾಖೆಗೆ ಒಪ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ ನಿಂದ ಮೇ 26 ರವರೆಗೆ ಖಾಸಗಿ ಬಸ್ಗಳಿಗೆ ತೆರಿಗೆ ವಿನಾಯಿತಿ ದೊರಕಿದೆ. ಆದ್ದರಿಂದ ನಾವು ಮೇ 27ರಿಂದ ಬಸ್ ಗಳ ಓಡಾಟ ಆರಂಭಿಸಬಹುದಿತ್ತು. ಆದರೆ, ಮೇ 27 ರಿಂದ ಮೇ 31ರವರೆಗೆ ಬಸ್ ಓಡಿಸಬೇಕಾದರೆ ಇಡೀ ತಿಂಗಳ ತೆರೆಗೆ ಪಾವತಿ ಮಾಡಬೇಕು. ಈ ಹಿನ್ನೆಲೆಯಲ್ಲಿ ಜೂ.1 ರಿಂದ ಬಸ್ ಸಂಚಾರ ಆರಂಭಿಸುತ್ತಿದ್ದೇವೆ ಎಂದು ಹೇಳಿದರು.