ಮಂಗಳೂರು: ನಗರದ ಎಕ್ಕೂರಿನ ಮಂಗಳೂರು ಮೀನುಗಾರಿಕಾ ಕಾಲೇಜು, ಇಂಡಿಯನ್ ಕೋಸ್ಟ್ ಗಾರ್ಡ್ ಹಾಗೂ ಸಿಐಎಸ್ಎಫ್ ಜಂಟಿ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನ ಅಭಿಯಾನ ಇಂದು ಬೆಳಗ್ಗೆ ತಣ್ಣೀರು ಬಾವಿ ಬೀಚ್ ಪರಿಸರದಲ್ಲಿ ನಡೆಯಿತು.
ಈ ಸಂದರ್ಭ ಮಂಗಳೂರು ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು, ಪ್ರೊಫೆಸರ್ಗಳು, ಸಿಬ್ಬಂದಿ, ಸಿಐಎಸ್ಎಫ್, ಕೋಸ್ಟ್ ಗಾರ್ಡ್ನ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮುದ್ರ ಕಿನಾರೆಯಲ್ಲಿ ಸ್ವಚ್ಛತಾ ಕಾರ್ಯ ನೆರವೇರಿಸಿದರು. ಬಳಿಕ ಸಮುದ್ರದ ಸುತ್ತಮುತ್ತಲಿನ ಜನರಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸಲು ಜಾಥಾ ಮಾಡಿದರು.
ಮಂಗಳೂರು ಮೀನುಗಾರಿಕಾ ಕಾಲೇಜಿನ ಡೀನ್ ಡಾ.ಸೆಂಥಿಲ್ ವೆಲ್ ಮಾತನಾಡಿ, ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತ ದೇಶದಲ್ಲಿ ಅತೀ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಇದರ ಬಗ್ಗೆ ಜಾಗೃತಿ ಮೂಡಿಸಲು ಈಗಾಗಲೇ ಹಲವಾರು ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿದೆ ಎಂದರು. ಇನ್ನು, ಮಂಗಳೂರು ಮೀನುಗಾರಿಕಾ ಕಾಲೇಜಿನ ಪ್ರೊಫೆಸರ್ ಎ.ಟಿ.ರಾಮಚಂದ್ರ ನಾಯಕ್ ಮಾತನಾಡಿ, ಚೆನ್ನೈ ರಾಷ್ಟ್ರೀಯ ಕರಾವಳಿ ಸಂಶೋಧನಾ ಸಂಸ್ಥೆ ಹಾಗೂ ಭೂವಿಜ್ಞಾನ ಸಚಿವಾಲಯ ಇದರ ನಿರ್ದೇಶನದಂತೆ ಸಮುದ್ರ ಕಿನಾರೆಯಲ್ಲಿರುವ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯವನ್ನು ತೆಗೆದು ಸಮುದ್ರ ತೀರ ಶುಚಿಗೊಳಿಸಲಾಗಿದೆ ಎಂದರು