ಮಂಗಳೂರು: ನಗರದಲ್ಲಿ ನಡೆದ ದೋಣಿ ದುರಂತದಲ್ಲಿ ಮೃತಪಟ್ಟ ಎಲ್ಲಾ ಮೀನುಗಾರರ ಕುಟುಂಬಸ್ಥರಿಗೆ ಮತ್ಸ್ಯಾಶ್ರಯ ಯೋಜನೆಯಡಿ ಸರ್ಕಾರ ನಿವೇಶನ ಒದಗಿಸಬೇಕೆಂದು ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘದ ಕೋಶಾಧಿಕಾರಿ ಇಬ್ರಾಹಿಂ ಬೇಂಗ್ರೆ ಒತ್ತಾಯಿಸಿದ್ದಾರೆ.
ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಸರ್ಕಾರ 6 ಲಕ್ಷ ರೂ. ಪರಿಹಾರಧನದ ಚೆಕ್ ಅನ್ನು ಮೃತರ ಕುಟುಂಬಸ್ಥರಿಗೆ ನೀಡಿದೆ. ಮೃತಪಟ್ಟ ಎಲ್ಲಾ ಮೀನುಗಾರರ ಕುಟುಂಬಸ್ಥರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಮೀನುಗಾರಿಕೆ ನಡೆಸಿಯೇ ಅವರು ಜೀವನ ನಿರ್ವಹಣೆ ಮಾಡಬೇಕಾಗಿದೆ. ಎಲ್ಲರೂ ಸಣ್ಣ-ಪುಟ್ಟ ಮಕ್ಕಳನ್ನು ಹೊಂದಿದ್ದು, ಸರಿಯಾದ ಮನೆಯೂ ಇಲ್ಲದೆ ಜೋಪಡಿಯಂಥ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಅವರ ಕುಟುಂಬಿಕರಿಗೆ ಮನೆ ನಿರ್ಮಾಣ ಮಾಡಿಕೊಡಬೇಕಾಗಿದೆ ಎಂದರು.
ಪರ್ಸಿನ್ ಬೋಟ್ನಲ್ಲಿ ಮೀನುಗಾರಿಕೆ ನಡೆಸಿ ಹಿಂದಕ್ಕೆ ಬರುವಾಗ ಬೋಟ್ ಮಗುಚಿ ಈ ದುರಂತ ನಡೆದಿದೆ. ಇದರಲ್ಲಿ ಆರು ಮಂದಿ ಕಣ್ಮರೆಯಾಗಿ ಐದು ಮಂದಿಯ ಮೃತದೇಹ ಈಗಾಗಲೇ ದೊರಕಿದೆ. ಮತ್ತೋರ್ವ ಮೀನುಗಾರನ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಅವರ ಮೃತದೇಹದ ಪತ್ತೆ ಕಾರ್ಯವು ಬೋಟ್ ಮಾಲೀಕರ ಸಂಘದ ವತಿಯಿಂದ ಹಾಗೂ ಇಲಾಖೆಯಿಂದಲೂ ನಡೆಯುತ್ತಿದೆ ಎಂದು ತಿಳಿಸಿದರು.