ಮಂಗಳೂರು: ಕೇರಳ ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚಳವಾಗುದ್ದು, ಕೇರಳ ಮತ್ತು ಕರ್ನಾಟಕ ಗಡಿಭಾಗವಾದ ಮಂಗಳೂರಿನ ತಲಪಾಡಿಯಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮತ್ತು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಪರಿಶೀಲನೆ ನಡೆಸಿದರು.
ಕೇರಳದಿಂದ ಜಿಲ್ಲೆಗೆ ಪ್ರವೇಶ ಮಾಡುವವರು ಕೋವಿಡ್ ಲಸಿಕೆ ಸರ್ಟಿಫಿಕೇಟ್ ಅಥವಾ ಆರ್‌ಟಿ-ಪಿಸಿಆರ್ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯವಾಗಿದೆ. ಒಂದು ವೇಳೆ ಈ ಸರ್ಟಿಫಿಕೇಟ್ ಇಲ್ಲದವರಿಗೆ ಸ್ಥಳದಲ್ಲಿ ಆರ್‌ಟಿ-ಪಿಸಿ ಆರ್ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಲಾಗಿದೆ.
ದೇವಿನಗರದಲ್ಲಿ ಹೊಸ ಚೆಕ್‌ಪೋಸ್ಟ್: ಕೇರಳದಿಂದ ಕರ್ನಾಟಕಕ್ಕೆ ಬರುವವರಿಗೆ ತಲಪಾಡಿ ಚೆಕ್‌ಪೋಸ್ಟ್ ನಲ್ಲಿ ತಪಾಸಣೆ ಇರುವುದರಿಂದ, ಒಳರಸ್ತೆಯಲ್ಲಿ ಬರುವುದನ್ನು ತಡೆಯಲು ತಲಪಾಡಿಯ ದೇವಿನಗರದ ಬಳಿ ಹೊಸ ಚೆಕ್ ಪೋಸ್ಟ್ ನಿರ್ಮಿಸಲು ಪರಿಶೀಲನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಕೇರಳದಿಂದ ಜಿಲ್ಲೆಗೆ ಬರುವವರಿಗೆ ಕೊರೊನಾ ಲಸಿಕೆ ಅಥವಾ ಆರ್ ಟಿ ಪಿ ಸಿ ಆರ್ ಸರ್ಟಿಫಿಕೇಟ್ ತೋರಿಸುವುದು ಕಡ್ಡಾಯವಾಗಿದೆ. ಆದರೆ ಕೊರೊನಾ ಲಸಿಕೆ ಪಡೆಯುವುದು ಅವರ ವೈಯಕ್ತಿಕ ರಕ್ಷಣೆಗಾಗಿ. ಲಸಿಕೆ ಪಡೆದವರಿಗೂ ಕೊರೊನಾ ಸೋಂಕು ತಗಲುವ ಸಾಧ್ಯತೆಯಿದ್ದು, ಗಡಿ ಪ್ರವೇಶಕ್ಕೆ ಲಸಿಕೆ ಸರ್ಟಿಫಿಕೇಟ್ ಬಗ್ಗೆ ಸರಕಾರದ ಸಲಹೆ ಕೇಳಲಾಗುತ್ತಿದೆ ಎಂದರು.
ಕೇರಳದಲ್ಲಿ ಕೊರೊನಾ ಪ್ರಕರಣ ಹೆಚ್ಚಳವಾಗಿರುವ ಜೊತೆಗೆ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಳವಾಗುತ್ತಿದೆ. ಕೇರಳದ ಕಾಸರಗೋಡು ಮತ್ತು ಜಿಲ್ಲೆಯ ನಡುವೆ ವ್ಯವಹಾರಿಕಾ, ಶೈಕ್ಷಣಿಕ ಸಂಬಂಧಗಳಿರಿವುದರಿಂದ ಕೇರಳದಿಂದ ಬರುವವರಿಂದ ಈ ಹೆಚ್ಚಳ ಆಗಿರುವ ಸಾಧ್ಯತೆ ಇದೆ. ನಾಳೆ ಜಿಲ್ಲೆಯ ಜನಪ್ರತಿನಿಧಿಗಳ ಸಭೆ ನಡೆಸಿ ಮುಂದೆ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಪ್ರತಿದಿನ 7-8 ಸಾವಿರ ಜನರಗೆ ಕೊರೊನಾ ತಪಾಸಣೆ ನಡೆಸಲಾಗುತ್ತಿದ್ದು, ಇದನ್ನು 10 ಸಾವಿರಕ್ಕೆ ಹೆಚ್ಚಿಸಲಾಗುವುದು. ವಾರದ ಸರಾಸರಿಯಲ್ಲಿ 3.7 ಪಾಸಿಟಿವ್ ರೇಟ್ ದಾಖಲಾಗುತ್ತಿದೆ ಎಂದರು.
ಇದನ್ನೂ ಓದಿ: ನೂತನ ಮುಖ್ಯಮಂತ್ರಿಗೆ ಎದುರಾಗುವ ಸವಾಲುಗಳೇನು? ಬೊಮ್ಮಾಯಿ ಮುಂದಿದೆ ಸಾಲು ಸಾಲು ಪ್ರಶ್ನೆ