ಮಂಗಳೂರು: ಸ್ವತಃ ನಗರ ಪೊಲೀಸ್ ಆಯುಕ್ತರು ಹಾಗೂ ಉಪ ಪೊಲೀಸ್ ಆಯುಕ್ತರು ಫೀಲ್ಡಿಗಿಳಿದು ಅಕ್ರಮ ಮರಳುಸಾಗಣೆದಾರರಿಗೆ ಚಳಿ ಬಿಡಿಸಿದ್ದಾರೆ. ಸ್ಕೂಟರ್ನಲ್ಲಿ ಬಂದು ಜಂಟಿ ನಡೆಸಿ ಅಕ್ರಮ ಮರಳು ಸಾಗಣೆಯ ಲಾರಿಯನ್ನು ತಡೆದು ನಿಲ್ಲಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮತ್ತು ಉಪ ಪೊಲೀಸ್ ಹರಿರಾಂ ಇಬ್ಬರೂ ಒಂದೇ ಸ್ಕೂಟರ್ನಲ್ಲಿ ಬಂದು ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭ ಇಬ್ಬರೂ ಪೊಲೀಸ್ ಸಮವಸ್ತ್ರದಲ್ಲಿಲ್ಲದೆ ಸಾಮಾನ್ಯ ಉಡುಪಿನಲ್ಲಿದ್ದರು. ರಾತ್ರಿ ವೇಳೆ ಕಾರ್ಯಾಚರಣೆ ನಡೆಸುತ್ತಿದ್ದಾಗ ಟೋಲ್ ದಾಟಿ ಕೇರಳ ಕಡೆಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ನೋಡಿ ಅಡ್ಡಗಟ್ಟಿದ್ದಾರೆ. ಈ ವೇಳೆ ಪೊಲೀಸ್ ಆಯುಕ್ತರೆಂದು ಗೊತ್ತಿಲ್ಲದೆ ಮರಳು ಲಾರಿಗೆ ಎಸ್ಕಾರ್ಟ್ ನೀಡುತ್ತಿದ್ದ ಕಾರಿನಲ್ಲಿದ್ದವರು ಅಡ್ಡಗಟ್ಟಲು ಮುಂದಾದಾಗ ಪೊಲೀಸ್ ಆಯುಕ್ತರು, ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಉಳ್ಳಾಲ ಪೊಲೀಸರು ಮರಳು ಲಾರಿಗೆ ಎಸ್ಕಾರ್ಟ್ ನೀಡುತ್ತಿದ್ದ ಚಂದ್ರ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
10 ಮಂದಿ ವಿರುದ್ಧ ಪ್ರಕರಣ:
ಘಟನೆಗೆ ಸಂಬಂಧಿಸಿದಂತೆ ಒಟ್ಟು 10 ಮಂದಿ ವಿರುದ್ಧ ಸುಮೋಟೊ ಪ್ರಕರಣ ದಾಖಲಿಸಲಾಗಿದೆ. ಟಿಪ್ಪರ್ ಚಾಲಕ ಸೂರಜ್, ಚಂದ್ರಹಾಸ, ರಾಕೇಶ್, ಸನಂ ಹಾಗೂ ಲಾರಿ ಮಾಲೀಕನ ವಿರುದ್ಧ ಸುಮೋಟೊ ಪ್ರಕರಣ ದಾಖಲಿಸಲಾಗಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ, ಮಂಗಳೂರು ದಕ್ಷಿಣ ಸಂಚಾರಿ ಠಾಣೆಯ ಎಸ್.ಐ ಚಂದ್ರ ಎಂಬವರನ್ನು ದೂಡಿ, ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಕೆ.ಸಿ ರೋಡ್ ನಿವಾಸಿ ಇಲ್ಯಾಸ್, ರಹೀಂ ಹಾಗೂ ಪರಾರಿಯಾದ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಎರಡು ಕಾರುಗಳ ಮೂಲಕ ಮರಳು ಲಾರಿಗಳಿಗೆ ಎಸ್ಕಾಟ್೯ ನೀಡುತ್ತಿದ್ದರು ಎನ್ನಲಾಗ್ತಿದೆ.
ಆಗಿದ್ದೇನು: ಪೊಲೀಸ್ ಕಮೀಷನರ್ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಂ ಶಂಕರ್ ಆಕ್ಟಿವಾ ಸ್ಕೂಟರ್ ಮೂಲಕ ನಸುಕಿನ 3ರ ಸುಮಾರಿಗೆ ತಲಪಾಡಿಯತ್ತ ರೌಂಡ್ಸ್ ನಡೆಸಿದ್ದರು. ಈ ವೇಳೆ ಸೋಮೇಶ್ವರ ಸಮುದ್ರ ತೀರದಿಂದ ಮರಳು ಕದ್ದು ಕೇರಳಕ್ಕೆ ಸಾಗಿಸುತ್ತಿರುವ ಟಿಪ್ಪರ್ ಲಾರಿಯನ್ನು ಕೆ.ಸಿ ರೋಡ್ ಬಳಿ ನಿಲ್ಲಿಸಲು ಸೂಚಿಸಿದ್ದರು. ಆದರೆ ಪೊಲೀಸ್ ಕಮೀಷನರ್, ಡಿಸಿಪಿ ಸಾಮಾನ್ಯರಂತೆ ಮಾರುವೇಷದಲ್ಲಿರುವುದು ಅರಿಯದ ಲಾರಿ ಚಾಲಕ ಸೀದಾ ಲಾರಿಯನ್ನು ಮುಂದಕ್ಕೆ ಚಲಾಯಿಸಿದ್ದನು. ಬೆಂಬಿಡದ ಅಧಿಕಾರಿಗಳು ಸ್ಕೂಟರ್ ಮೂಲಕ ಲಾರಿಯನ್ನು ಹಿಂಬಾಲಿಸಿ ಟೋಲ್ ಗೇಟ್ ನಲ್ಲಿ ಅಡ್ಡಹಾಕಿದ್ದಾರೆ. ಬಳಿಕ ಉಳ್ಳಾಲ ಠಾಣೆಯ ಪೊಲೀಸರನ್ನು ಕರೆಸಿ 2 ಕಾರು, 6 ಬೈಕ್ ಮತ್ತು 6 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಓದಿ: ಕಳ್ಳತನಕ್ಕೆ ಪ್ರತಿರೋಧವೊಡ್ಡಿದ ಯುವತಿ ಮೇಲೆ ಸರಗಳ್ಳನಿಂದ ಹಲ್ಲೆ: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ