ಮಂಗಳೂರು: ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿರುವ ಕೊರೊನಾ ಭೀತಿ ಮುಂದೆ ಕಠಿಣ ದಿನಗಳಿಗೆ ಸಾಕ್ಷಿಯಾಗಲಿದೆ. ಸದ್ಯ ದೇಶದಲ್ಲಿ ಆಹಾರ ಸಾಮಗ್ರಿಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಆದರೆ ಮುಂಬರುವ ದಿನಗಳಲ್ಲಿ ಮನೆ ಮನೆಗೆ ಆಹಾರ ಸಾಮಾಗ್ರಿ ಪೂರೈಸುವ ನಿಟ್ಟಿನಲ್ಲಿ ಶಾಸಕ ಡಿ. ವೇದವ್ಯಾಸ್ ಕಾಮತ್ ಆತಂಕ ಹೊರ ಹಾಕಿದ್ದಾರೆ.
ಆಹಾರ ಪೂರೈಕೆ ಸಂಸ್ಥೆಗಳಾದ ಜೊಮ್ಯಾಟೋ, ಊಬರ್ ಈಟ್ಸ್ ಮತ್ತಿತರ ಸಂಸ್ಥೆಗಳೊಂದಿಗೆ ಸಭೆ ನಡೆಸಿದ ಅವರು, ಸಾರ್ವಜನಿಕರಲ್ಲಿ ಕೆಲವರು ಕೊರೊನಾ ಸೋಂಕು ಹರಡುವ ವಿಚಾರವನ್ನು ಲಘುವಾಗಿ ತೆಗೆದುಕೊಂಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ಬಹುದೊಡ್ಡ ಅಪಾಯಕ್ಕೆ ಕಾರಣವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸದ್ಯ ಆಹಾರ ಸಾಮಗ್ರಿಗಳ ಪೂರೈಕೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಸಂಪೂರ್ಣ ಕರ್ಫ್ಯೂ ಜಾರಿಯಾದರೆ ಆಹಾರ ಪೂರೈಕೆದಾರ ಸಂಸ್ಥೆಗಳ ಮೂಲಕ ಮನೆ ಮನೆಗೆ ಆಹಾರ ಸಾಮಾಗ್ರಿಗಳನ್ನು ತಲುಪಿಸುವ ಯೋಜನೆಯನ್ನು ಹಾಕಲಾಗಿದೆ.
ಸಹಾಯವಾಣಿ ಕೇಂದ್ರದ ಮೂಲಕ ಜನರೊಂದಿಗೆ ನಿರಂತರ ಸಂಪರ್ಕ ಕಲ್ಪಿಸಿ ತುರ್ತಾಗಿ ಬೇಕಾದ ಸಾಮಗ್ರಿಗಳನ್ನು ತಲುಪಿಸಬೇಕಾಗಿದೆ. ಮನೆ ಮನೆಗೆ ಸಿದ್ಧ ಆಹಾರ, ಆಹಾರ ಸಾಮಗ್ರಿ, ತರಕಾರಿ, ಔಷಧೀಯ ಸಾಮಾಗ್ರಿಗಳನ್ನು ತಲುಪಿಸಲು ಹಲವಾರು ಆಹಾರ ಪೂರೈಕೆ ಸಂಸ್ಥೆಗಳು ಮುಂದೆ ಬಂದಿವೆ. ಆದರೆ ಕಾಲಾನುಕ್ರಮದಲ್ಲಿ ಇವೆಲ್ಲವನ್ನೂ ಜೋಡಿಸಿ ಜನರಿಗೆ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.