ಮಂಗಳೂರು : ಶ್ರೀಲಂಕಾದಿಂದ ಕೆನಡಾಗೆ ಮಾನವ ಕಳ್ಳಸಾಗಣೆ ನಡೆಸುತ್ತಿದ್ದ ಬೃಹತ್ ಜಾಲವನ್ನು ಮಂಗಳೂರು ಪೊಲೀಸರು ಪತ್ತೆ ಹಚ್ಚಿದ್ದು, 38 ಶ್ರೀಲಂಕಾ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಲಂಕಾದಿಂದ ಮಾರ್ಚ್ ತಿಂಗಳಲ್ಲಿ 39 ಪ್ರಜೆಗಳು ಪ್ರಯಾಣಿಸಿದ್ದರು. ಶ್ರೀಲಂಕಾದ ಏಜೆಂಟನೊಬ್ಬ ಪ್ರತಿಯೊಬ್ಬರಿಂದ ತಲಾ 5 ಲಕ್ಷದಿಂದ 10 ಲಕ್ಷದವರೆಗೆ ಹಣವನ್ನು ಪಡೆದುಕೊಂಡು ಕೆನಡಾ ದೇಶಕ್ಕೆ ಕಳುಹಿಸಲು ಯೋಚಿಸಿದ್ದನು. ಅದರಂತೆ ಆತ ಶ್ರೀಲಂಕಾದಿಂದ ದೋಣಿಯ ಮುಖಾಂತರ ತಮಿಳುನಾಡು ರಾಜ್ಯದ ತೂತುಕುಡಿ ಎಂಬ ಸ್ಥಳಕ್ಕೆ 39 ಮಂದಿಯನ್ನು ಕಳುಹಿಸಿದ್ದ.
ತಮಿಳುನಾಡಿನಲ್ಲಿ ಚುನಾವಣಾ ಕಾರಣದಿಂದ ಲಾಡ್ಜ್ ಗಳಲ್ಲಿ ತಪಾಸಣೆ ಜಾಸ್ತಿ ಇದ್ದ ಕಾರಣ ಅವರನ್ನು ಬೆಂಗಳೂರು ಮೂಲಕ ಮಂಗಳೂರಿಗೆ ಕಳುಹಿಸಲಾಗಿದೆ. ಹೀಗೆ ಬಂದ 39 ಮಂದಿ ಮಂಗಳೂರಿನ ಲಾಡ್ಜ್ ಮತ್ತು ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕಳೆದ ಒಂದು ತಿಂಗಳಿನಿಂದ ಅಕ್ರಮವಾಗಿ ವಾಸವಿದ್ದ 38 ಶ್ರೀಲಂಕಾ ಪ್ರಜೆಗಳನ್ನು ಬಂಧಿಸಲಾಗಿದ್ದು ಇನ್ನೋರ್ವನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದರು.
ಮಂಗಳೂರಿನಲ್ಲಿ ಬಂಧಿಸಲಾಗಿರುವ 38 ಶ್ರೀಲಂಕಾ ಪ್ರಜೆಗಳ ಕೋವಿಡ್ ಪರೀಕ್ಷೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಈ ಬೃಹತ್ ಮಾನವ ಸಾಗಣೆಯಲ್ಲಿ ಶ್ರೀಲಂಕಾ, ತಮಿಳುನಾಡು, ಬೆಂಗಳೂರಿನಲ್ಲಿ ಏಜೆಂಟ್ಗಳಿದ್ದೂ ಮಂಗಳೂರಿನಲ್ಲಿ ಇವರ ಸಂಪರ್ಕದಲ್ಲಿ ಇರುವವರ ಬಗ್ಗೆ ತನಿಖೆ ನಡೆಸಲಾಗುವುದು. ದೇಶದ ಆಂತರಿಕಾ ಭದ್ರತಾ ವಿಚಾರವಾಗಿರುವುದರಿಂದ ವಿವಿಧ ಪೊಲೀಸ್ ವಿಭಾಗಕ್ಕೆ ಮಾಹಿತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.